ಆರೋಗ್ಯ ಯೋಜನೆಗಳ ರೂಪಿಸಲು ಆರೋಗ್ಯ ಪೌಷ್ಠಿಕ ಸಮೀಕ್ಷೆ ಸಹಕಾರಿ

ಚಿತ್ರದುರ್ಗ. ಜೂ.೨೩; ಆರೋಗ್ಯ ಪೌಷ್ಠಿಕ ಸಮೀಕ್ಷೆ ಆರೋಗ್ಯ ಯೋಜನೆಗಳ ರೂಪಿಸುವಲ್ಲಿ ಸಹಕಾರಿಯಾಗಿದೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಣ್ಣಿಗೆರೆ ಗ್ರಾಮದಲ್ಲಿ ಬುಧವಾರ ಆರೋಗ್ಯ ಪೌಷ್ಟಿಕ ಸಮೀಕ್ಷೆ ಮೇಲ್ವಿಚಾರಣೆಯಲ್ಲಿ ಅವರು ಮಾತನಾಡಿದರು.
ಆರೋಗ್ಯ ಪೌಷ್ಟಿಕ ಸಮೀಕ್ಷೆಯು ಆರೋಗ್ಯ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ನಡೆಸುವ ಸಮೀಕ್ಷೆಯಾಗಿದೆ. ಈ ಸಮೀಕ್ಷೆಯು ಆರೋಗ್ಯ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದರು.ಸಮೀಕ್ಷೆಯಲ್ಲಿ ಅಪೌಷ್ಟಿಕತೆ ಗರ್ಭಿಣಿಯ ಮಾಹಿತಿ, ರಕ್ತ ಹೀನತೆ ಗಂಡಾಂತರದ ಗರ್ಭಧಾರಣೆ, ಮಾನಸಿಕ ಆರೋಗ್ಯ ವಂಶ ಪಾರಂಪರ್ಯವಾಗಿ ಬರುವಂತಹ ಕಾಯಿಲೆಗಳ ಮಾಹಿತಿ ದತ್ತಾಂಶಗಳನ್ನು ಮೊಬೈಲ್ ಆಪ್ ಮೂಲಕ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಮನೆ ಮನೆ ಭೇಟಿ ನಡೆಸಿ ಮಾಹಿತಿ ಸಂಗ್ರಹಿಸುವುದಾಗಿದೆ ಎಂದು ತಿಳಿಸಿದರು.ನಿಮ್ಮ ನಿಮ್ಮ ಮನೆಗೆ ಬರುವಂತಹ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಮಾಹಿತಿ ಒದಗಿಸುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ. ದತ್ತಾಂಶಗಳ  ಕ್ರೋಡೀಕರಣಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.ಗ್ರಾಮದಲ್ಲಿ 180 ಮನೆಗಳಿದ್ದು, ಈ ದಿನ 165 ಮನೆಗಳ ಮಾಹಿತಿ ದತ್ತಾಂಶಗಳನ್ನು ಮೊಬೈಲ್ ಆಪ್‍ನಲ್ಲಿ ಸಂಗ್ರಹಿಸಲಾಯಿತು. ಅಂಗನವಾಡಿ ಕೇಂದ್ರದಲ್ಲಿ ಲಸಿಕಾ ಕಾರ್ಯಕ್ರಮಮ ನಡೆಸಿ 15 ಮಕ್ಕಳಿಗೆ 12 ಮಾರಕ ರೋಗಗಳ ವಿರುದ್ಧ  ಲಸಿಕೆ ನೀಡಲಾಯಿತು. ಆಶಾ ಬೋಧಕಿ ಪದ್ಮಜಾ ಅವರು ವಾರಕ್ಕೆ ಎರಡು ಬಾರಿ ಐದು ವರ್ಷದ ಒಳಗಿನ ಮಕ್ಕಳಿಗೆ ನೀಡುವ ಐರನ್ ಸಿರಪ್ ನೀಡಿರುವ ದಾಖಲಾತಿ ಪರಿಶೀಲಿಸಿದರು.ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗರೆಡ್ಡಿ, ಶ್ರೀಧರ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಅನಿತಾ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.