ಆರೋಗ್ಯ ಮಾನವನ ಮೊದಲ ಆದ್ಯತೆಯಾಗಲಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.14: ಆರೋಗ್ಯವೇ ಭಾಗ್ಯ ಮಾನವನ ಮೊದಲ ಆದ್ಯತೆ, ಇಂತಹ ಗುರಿಯ ಸಾಧನೆಗೆ ಆರೋಗ್ಯ ಶಿಕ್ಷಣವೇ ಬಹಳ ಮುಖ್ಯವಾಗಿದ್ದು, ಆರೋಗ್ಯ ಇಲಾಖೆಯಿಂದ ಆರೋಗ್ಯ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ ತಿಳಿಸಿದರು.
ನಗರದ ಸಿ.ಡಿ.ಪಿ.ಒ. ಕಛೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಶನಿವಾರ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಹಾರ, ಆರೋಗ್ಯದ ರೂಢಿಗಳು, ರೋಗಗಳನ್ನು ತಡೆಗಟ್ಟುವುದು, ರೋಗಗಳು ಹರಡುವ ಅಂಶಗಳು ಮತ್ತು ಅವುಗಳಿಂದ ಮುಕ್ತವಾಗುವ ಕ್ರಮ, ವೈಯಕ್ತಕ ಮತ್ತು ಪರಿಸರದ ಸ್ವಚ್ಛತೆ ಆರೋಗ್ಯ ಶಿಕ್ಷಣದ ಪ್ರಮುಖ ಅಂಶಗಳಾಗಿದ್ದು, ಈ ಅಂಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಸತ್ವ ಪೂರ್ಣ ತೃಪ್ತಿ ಸಮಾಧಾನಗಳಿಂದ ತುಂಬಿದ ಸಾರ್ಥಕ ಜೀವನ ನಡೆಸಲು ಅವಶ್ಯವಾದ ದೇಹ ಶಕ್ತಿ ಮತ್ತು ಬುದ್ದಿಶಕ್ತಿಯನ್ನು ವೃದ್ಧಿಸಿಕೊಳ್ಳುವುದೇ ಆರೋಗ್ಯ ಶಿಕ್ಷಣದ ಗುರಿಯಾಗಿದೆ. 
ಉತ್ತಮ ಆರೋಗ್ಯ ಸಾದಕ ಅಭ್ಯಾಸಗಳನ್ನು ಬೆಳೆಸುವ ಉದ್ದೇಶದಿಂದ ಜನರ ಜ್ಞಾನದಲ್ಲೂ ಮನೋಭಾವದಲ್ಲೂ ಚರ್ಚೆಯಲ್ಲೂ ಪರಿವರ್ತನೆ ಮೂಡಿಸುವುದೇ ಸಾಮಾನ್ಯ ಶಿಕ್ಷಣದ ಉದ್ದೇಶವಾಗಿದ್ದು, ಆರೋಗ್ಯ ಶಿಕ್ಷಣದ ಮೂಲ ಉದ್ದೇಶವು ಇದೇ ಆಗಿದೆ. ಆದ್ದರಿಂದ ಆರೋಗ್ಯ ಶಿಕ್ಷಣದ ಮೌಲ್ಯಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಮಾತನಾಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.