ಆರೋಗ್ಯ ಭಾಗ್ಯಕ್ಕಿಂತ ಮತ್ತೊಂದು ಶ್ರೀಮಂತಿಕೆ ಇಲ್ಲ : ರಾಜೇಂದ್ರ ಪಾಟೀಲ ರೇವೂರ

ಅಫಜಲಪುರ:ನ.7:ಇಂದಿನ ಒತ್ತಡದ ಜೀವನದಲ್ಲಿ ಎಲ್ಲರೂ ಒಂದಿಲ್ಲೊಂದು ಕಾಯಿಲೆಗೆ ಸಿಲುಕುತಿದ್ದು,ಕಾಯಿಲೆಗಳಿಂದ ಗುಣಮುಖರಾಗಲು ಆಗಾಗ ವೈದ್ಯರ ಸಲಹೆ ಅತ್ಯಗತ್ಯ ಹೀಗಾಗಿ ಬಡ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಜೇಂದ್ರ ಪಾಟೀಲ್ ರೇವೂರ ತಿಳಿಸಿದರು.
ತಾಲೂಕಿನ ದೇವಲ ಗಾಣಗಾಪುರದಲ್ಲಿ ಆರ್.ವಿ.ಪಾಟೀಲ್ ರೇವೂರ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಕಾಲು,ಕೀಲು ನೋವು,ಕಣ್ಣಿನ ಸಮಸ್ಯೆ, ಬಿಪಿ, ಶುಗರ್ ಸೇರಿದಂತೆ ಹಲವು ರೀತಿಯ ಕಾಯಿಲೆಗಳಿಂದ ಬಳಲುತ್ತಿರುವುದು ಕಂಡು ಬರುತ್ತದೆ.ಆದರೂ ಬಹುತೇಕ ಕುಟುಂಬಗಳು ಆರ್ಥಿಕ ಸಮಸ್ಯೆಗಳಿಂದ ದೂರದ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.ಇದನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಭಾಗದ ನಮ್ಮ ಬಡ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡುತ್ತಿದ್ದೇವೆ.ಆದ್ದರಿಂದ ತಾಲೂಕಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆರ್.ವಿ.ಪಾಟೀಲ್ ರೇವೂರ ಫೌಂಡೇಶನ್ ಅಧ್ಯಕ್ಷ ಬಸಣ್ಣಾ ಗುಣಾರಿ ಮಾತನಾಡಿ,ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನ ಇಂದಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ.ಕಾಯಿಲೆ ಬರುವ ಮುನ್ನವೇ ಎಚ್ಚರ ವಹಿಸಿದರೆ ಆಸ್ಪತ್ರೆ, ಗುಳಿಗೆ ಮುಂತಾದ ಕಷ್ಟಗಳಿಂದ ಪಾರಾಗಬಹುದು.ಹಳ್ಳಿಗಳಲ್ಲೂ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ.ಆರೋಗ್ಯ ಇದ್ದರೆ ನಾವು ಸುಖ­ವಾಗಿ ಬಾಳಬಹುದು.ಕಷ್ಟಪಟ್ಟು ದುಡಿದ ಹಣವನ್ನು ಆಸ್ಪತ್ರೆಗೆ ಸುರಿ­ಯುವ ಬದಲು ಕಾಯಿಲೆ ಬರದಂತೆ ತಡೆಯು­ವುದು ಜಾಣತನವಾಗಿದೆ.ಈ ನಿಟ್ಟಿನಲ್ಲಿ ರಾಜೇಂದ್ರ ಪಾಟೀಲ್ ರೇವೂರ ನೇತೃತ್ವದಲ್ಲಿ ತಾಲೂಕಿನಲ್ಲಿ ಬಹುತೇಕ ಹಳ್ಳಿಗಳಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.ಈಗಾಗಲೇ ಹಲವು ಹಳ್ಳಿಗಳಲ್ಲಿನ ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ವೀರ ಮಾಹಾಂತ ಶಿವಾಚಾರ್ಯರು ಚಿನ್ಮಯಗಿರಿ ಶ್ರೀಗಳು
ತಾಲೂಕಿನಲ್ಲಿ ನಿರಂತರವಾಗಿ ಒಂದಿಲ್ಲೊಂದು ರೀತಿಯಲ್ಲಿ ಬಡಜನರ ಸೇವೆಯಲ್ಲಿ ತೊಡಗಿರುವ ರಾಜೇಂದ್ರ ಪಾಟೀಲ್ ರೇವೂರ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.ಬಡ ಜನರ ಅನುಕೂಲಕ್ಕಾಗಿ ಇಂತಹ ಬೃಹತ್ ಆರೋಗ್ಯ ಶಿಬಿರ ಏರ್ಪಾಡು ಮಾಡಿದ್ದಾರೆ.ಇದರ ಲಾಭ ಎಲ್ಲರೂ ಪಡೆದುಕೊಳ್ಳಬೇಕು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸುಮಿತ್ ಪಾಟೀಲ್, ಕರುಣಾಕರ ಭಟ್, ತಿಪ್ಪಣ್ಣ ಚಿನ್ನಮಳ್ಳಿ, ಗುಂಡಪ್ಪ ಹೊಸಮನಿ, ಚಂದ್ರಕಾಂತ ದೇವರಮನಿ, ವೈದ್ಯರಾದ ಪಿ.ಎಸ್.ರಾವ್,ಶರತ್ ಪಾಟೀಲ್, ಪವಿತ್ರಾ ಹೊಸಮನಿ, ನಾಗವೇಣಿ ಪಾಟೀಲ್, ಸುನೀಲ್ ಪಾಟೀಲ್,ವಿರೇಶ ಕೋರವಾರ ಸೇರಿದಂತೆ ಇನ್ನಿತರು ಇದ್ದರು.ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಂದು ಸಾವಿರಕ್ಕೂ ಅಧಿಕ ಜನ ತಪಾಸಣೆ ಮಾಡಿಕೊಂಡರು.