ಮಾನ್ವಿ,ಜೂ.೨೮-
ಪಟ್ಟಣದ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ತಾ.ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾನಸಿಕ ರೋಗ ತಜ್ಞರಾದ ಡಾ. ಮನೋಹರ್ ಪತ್ತಾರ ಮಾತನಾಡಿ ಪ್ರತಿಯೊಬ್ಬರು ಜೀವನದಲ್ಲಿ ಬರುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸುವ ಮನೋ ಗುಣವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕ ಆರೋಗ್ಯ ಇಲಾಖೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬದಲ್ಲಿನ ಸಮಸ್ಯೆ, ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಗಾಗಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾದಲ್ಲಿ ಮಾನಸಿಕ ಕಾಯಿಲೆಗಳು ಬರುವುದರಿಂದ ವ್ಯಸನಗಳಿಗೆ ಒಳಗಾಗದೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಆಸಾಂಕ್ರಾಮಿಕ ರೋಗ ವಿಭಾಗದ ವೈದ್ಯಾಧಿಕಾರಿ ಚಂದ್ರಶೇಖರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಬಿಡುಗಡೆ ಗೊಳಿಸಲಾಯಿತು.
ಮಾನಸಿಕ ಆರೋಗ್ಯ ವಿಭಾಗದ ಗಂಗಮ್ಮ, ಶುಶ್ರೂಷಕ ಅಧಿಕಾರಿ ಅನ್ನಪೂರ್ಣ ಆಪ್ತಸಮಾಲೋಚಕರು ಅರುಣಕುಮಾರ ಸೇರಿದಂತೆ ಇನ್ನಿತರರು ಇದ್ದರು.