ಆರೋಗ್ಯ ಜೀವನದ ಗುರಿಯಾಗಿರದೆ, ಜೀವನಶೈಲಿಯಾಗಲಿ

ಕಲಬುರಗಿ:ಎ.7: ಮನುಷ್ಯ ಅನಾರೋಗ್ಯಪೀಡಿತನಾದಾಗ ಆರೋಗ್ಯವಾಗಿರಲು ಔಷಧ ಸೇವನೆ, ವ್ಯಾಯಾಮದಂತಹ ಕ್ರಮಗಳನ್ನು ಅನುಸರಿಸುವ ಕ್ರಮವಾಗಿ ಆರೋಗ್ಯವನ್ನು ಗುರಿಯನ್ನಾಗಿಸದೆ, ಪೌಷ್ಠಿಕಾಂಶಗಳುಳ್ಳ ಆಹಾರ, ಶುದ್ಧವಾದ ನೀರಿನÀ ಸೇವನೆ, ವ್ಯಾಯಾಮ, ಯೋಗ, ಸಕಾರಾತ್ಮಕ ಚಿಂತನೆ ಸೇರಿದಂತೆ ಮುಂತಾದ ಆರೋಗ್ಯಕರ ಜೀವನಶೈಲಿ ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ, ನಿರಂತರವಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆಯೆಂದು ಆರೋಗ್ಯ ಶಿಕ್ಷಣಾಧಿಕಾರಿ ಅಂಬಾರಾಯ ತಂಗಾ ಅಭಿಮತ ವ್ಯಕ್ತಪಡಿಸಿದರು.

     ನಗರದ ಹುಮನಾಬಾದ ರಸ್ತೆಯ ಬೇಲೂರ ಕ್ರಾಸ್‍ನಲ್ಲಿರುವ 'ಶಕುಂತಲಾ ಪಾಟೀಲ ಪಿಯು ಕಾಲೇಜ್'ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಆರೋಗ್ಯ ದಿನಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

     ಮಾನವ ಎಷ್ಟೆಲ್ಲಾ ಭೌತಿಕ ಸಂಪತ್ತು ಗಳಿಸಿದರು ಕೂಡಾ, ಅವುಗಳನ್ನು ಅನುಭವಿಸಲು ಅರೋಗ್ಯ ಇರದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ. ಆರೋಗ್ಯವೇ ದೊಡ್ಡ ಸಂಪತ್ತಾಗಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ಮನೆಯಲ್ಲಿ ತಯಾರಿಸಿದ ತಾಜಾ ಆಹಾರ ಸೇವಿಸಿ. ಎಣ್ಣೆಯಲ್ಲಿ ಕರಿದ, ಬೇಯಿಸಿದ ಆಹಾರ, ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮಾಡಬೇಡಿ. ಪೌಷ್ಠಕಾಂಶಗಳುಳ್ಳ ಆಹಾರ, ತರಕಾರಿ, ಹಣ್ಣುಗಳನ್ನು ಸೇವಿಸಿ. ಶುದ್ದವಾದ ನೀರನ್ನು ಯತೇಚ್ಛವಾಗಿ ಕುಡಿಯಿರಿ. ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮಾಡಿಯೆಂದು  ಆರೋಗ್ಯದ ಬಗ್ಗೆ ಅನೇಕ ಸಲಹೆ-ಸೂಚನೆಗಳು, ಸಾಮಾನ್ಯ ಕಾಯಿಲೆಗಳ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.

ಸಂಸ್ಥೆ ಅಧ್ಯಕ್ಷ ಡಾ.ಚಿದಂಬರಾವ ಎಸ್.ಪಾಟೀಲ ಮರಗುತ್ತಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೂ ಕೂಡಾ ಕರೋನಾದಂತಹ ಹೊಸ ರೋಗಗಳು ಉಂಟಾಗುತ್ತಿವೆ. ಮನುಷ್ಯ ಯಾಂತ್ರಿಕ ಬದುಕು ಸಾಗಿಸುತ್ತಿದ್ದಾನೆ. ಅನಿಯಮಿತ ದುಡಿಮೆ, ಆಹಾರ ಪದ್ದತಿ, ಆರೋಗ್ಯದ ಕಡೆ ಗಮನ ಹರಿಸದೆ ಅನಾರೋಗ್ಯಕ್ಕೆ ಈಡಾಗುತ್ತಿರುವುದು ಕಂಡು ಬರುತ್ತಿದ್ದು, ಇದರ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೈದ್ಯರು, ಆರೋಗ್ಯ ಸಂಸ್ಥೆಯ ಸಲಹೆಗಳನ್ನು ಅನುಸರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಸುನೀಲಕುಮಾರ ವಂಟಿ ಮಾತನಾಡಿದರು. ಸಂಸ್ಥೆ ಗೌರವ ಅಧ್ಯಕ್ಷೆ ಶಕುಂತಲಾ ಸಿ.ಪಾಟೀಲ, ಕಾರ್ಯದರ್ಶಿ ಶಿವರಾಜ ಸಿ.ಪಾಟೀಲ, ಖಜಾಂಚಿ ರಾಜಶೇಖರ ಸಿ.ಪಾಟೀಲ, ಪ್ರಾಂಶುಪಾಲ ಡಾ.ಶಿವಶಂಕರ, ಉಪನ್ಯಸಕರಾದ ಬಸವರಾಜ ಎಸ್.ಪುರಾಣೆ, ರೇಣುಕಾ ಮಾನೆ, ರಾಕುಮಾರ ಮಚಟ್ಟಿ, ಡಾ.ಶಿವನಾಗಮ್ಮ ಪಾಟೀಲ, ಶಾಂತವರ ಸ್ವಾಮಿ, ಶವಕುಮಾರ ಮುನ್ನಳ್ಳಿ, ಸಿಬ್ಬಂದಿಗಳಾದ ಗಂಗಾಧರ ಮಠಪತಿ, ಮಾಳಪ್ಪ ಪೂಜಾರಿ, ಸಿದ್ದು ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.