ಕೋಲಾರ,ಏ.೯- ವಿಶ್ವ ಆರೋಗ್ಯ ದಿನದ ಅಂಗವಾಗಿ ಕೆಡಿಎಪಿ ವತಿಯಿಂದ ಕೋಲಾರ ನಗರದಲ್ಲಿ ಆರೋಗ್ಯ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯಶಸ್ವಿಯಾಗಿ ನೆರವೇರಿತು.
ಕೆಡಿಎಪಿ ಸಂಸ್ಥೆಯ ವತಿಯಿಂದ ತಜ್ಞ ವೈದ್ಯರುಗಳ ತಂಡದ ಸಮೇತ ಹೊಸ ಬಸ್ ನಿಲ್ದಾಣದಿಂದ ಅಂತರಗಂಗೆ ಬೆಟ್ಟದ ತಪ್ಪಲಿನವರೆಗೂ ನಡೆದ ಕಾಲ್ನಡಿಗೆ ಜಾಥಕ್ಕೆ ಡಿಎಚ್‌ಓ ಡಾ.ಜಗದೀಶ್. ಕೆಡಿಎಪಿ ಗೌರವಾಧ್ಯಕ್ಷ ಡಾ. ಕೃಷ್ಣಪ್ಪ ಮತ್ತು ಆರ್.ಎಂ.ಓ ಡಾ.ಬಾಲಸುಂದರ್ ಹಾಗೂ ಕೆಡಿಎಪಿ ಅಧ್ಯಕ್ಷ ಡಾ.ವೈ.ಸಿ ಬೀರೇಗೌಡ ಚಾಲನೆ ನೀಡಿದರು.
ತ್ರಿವಿಧ ಆರೋಗ್ಯ ಸೂತ್ರಗಳಾದ ವ್ಯಾಯಾಮ, ಯೋಗ ಮತ್ತು ಸಮತೋಲನ ನಿಯಮಿತ ಆಹಾರ ಪದ್ಧತಿ ಈ ಮೂರನ್ನು ಸಮಾನಾಂತರವಾಗಿ ಕಾಯ್ದುಕೊಂಡು ಹೋದಲ್ಲಿ ಉತ್ತಮ ಆರೋಗ್ಯ ರೂಡಿಸಿಕೊಳ್ಳುವ ದಿನಚರಿ ಪ್ರತಿಯೊಬ್ಬರ ಬದುಕಿನ ಸೂತ್ರವಾಗಬೇಕು ಎನ್ನುವ ಬಹುದೊಡ್ಡ ಆಶಯದಿಂದ ನೂರು ಜನರ ತಂಡವನ್ನು ಒಳಗೊಂಡ ವೈದ್ಯರು ಈ ವಿಶೇಷ ಜಾಥವನ್ನು ಏರ್ಪಡಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಸಂದೇಶವನ್ನು ನಾಡಿಗೆ ನೀಡಿದರು..
ಅಂತರಗಂಗೆಯ ಬೆಟ್ಟದ ತಪ್ಪಲಿನಲ್ಲಿ ಸರಳ ವ್ಯಾಯಾಮ ಯೋಗ ನಡೆಯಿತು. ನಂತರ ನಿಯಮಿತ ಆಹಾರದ ವಿತರಣೆ ಆಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಡಿಎಚ್.ಓ ಡಾ.ಜಗದೀಶ್ ಐಏಪಿ ಡಾ. ಕೃಷ್ಣಪ್ಪ, ಆರ್.ಎಂ.ಓ ಡಾ.ಬಾಲಸುಂದರ್ ಕೆ.ಡಿ.ಪಿ ಅಧ್ಯಕ್ಷ ಡಾ.ವೈ.ಸಿ.ಬಿರೇಗೌಡ ಇವರುಗಳು ಮಾತನಾಡುತ್ತಾ, ಉತ್ತಮ ಆರೋಗ್ಯ ಪಡೆಯುವ ನಿಟ್ಟಿನಲ್ಲಿ ವಿಶ್ವದ ಎಲ್ಲಾ ಜನರು ಈ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಮತ್ತು ಸಮರ್ಪಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ವಿಶೇಷ ಜಾಥದ ಮೂಲಕ ಸಮಾಜಕ್ಕೆ ನಾಡಿಗೆ ಮತ್ತು ವಿಶ್ವಕ್ಕೆ ಉತ್ತಮ ಸಂದೇಶ ರವಾನೆ ಆಗುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಡಾ.ಶ್ರೀಹರಿ, ಡಾ.ನರೇಂದ್ರ, ಡಾ.ಶ್ರೀನಾಥ್, ಡಾ.ಅಂಬರೀಶ್, ಡಾ.ಆಶಾ ಮತ್ತಿತರರು ಸುಮಾರು ೮೦ಕ್ಕೂ ಅಧಿಕ ವೈದ್ಯರುಗಳು ಭಾಗಿಯಾಗಿದ್ದರು.