ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಕ್ಕೆ ಆನ್ಲೈನ್ ಸಮಾವೇಶದಲ್ಲಿ ಎಐಡಿವೈಒ ಆಗ್ರಹ

ಕಲಬುರಗಿ.ಜೂ.07:ಆರೋಗ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯವನ್ನು ಕಲ್ಪಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಆನ್ಲೈನ್ ಸಮಾವೇಶದಲ್ಲಿ ಒತ್ತಾಯಿಸಲಾಗಿದೆ.
ಎಐಡಿವೈಒ ಮತ್ತು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಗಳ ಜಂಟಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅನ್‍ಲೈನ್ ಸಮಾವೇಶವನ್ನು ಉದ್ಘಾಟಿಸಿದ ಮೆಡಿಕಲ್ ಸರ್ವಿಸ್ ಸೆಂಟರ್‍ನ ರಾಜ್ಯಾಧ್ಯಕ್ಷೆ ಡಾ. ಸುಧಾ ಕಾಮತ್ ಅವರು ಮಾತನಾಡಿ, ಕೋವಿಡ್ 2ನೇ ಅಲೆಯು ಲಕ್ಷಾಂತರಜನರ ಬಲಿ ಪಡೆದಿದೆ, 3ನೇ ಅಲೆಯ ಭೀತಿ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾವೇಶವು ನಡೆಯುತ್ತಿದೆ ಎಂದರು.
2ನೇ ಅಲೆಯನ್ನು ಎದುರಿಸಲುಸ ಕಾಲದಲ್ಲಿ ಸೂಕ್ತ ಸಿದ್ಧತೆ ಮಾಡಿಕೊಂಡಿದ್ದಿದ್ದರೆ, ಈ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸುತ್ತಿರಲಿಲ್ಲ. ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ದೇಶಕ್ಕೆ ಸ್ವಾತಂತ್ಯ್ರ ಬಂದಾಗಿನಿಂದಲೂ ಎಲ್ಲ ಸರ್ಕಾರಗಳು ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿವೆ. ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ಸೇವೆ ಸಿಗಬೇಕು ಎಂದು ಸ್ವತಂತ್ರಪೂರ್ವದಲ್ಲಿಯೇ ಜಸ್ಟೀಸ್ ಬೋರ್ ಆಯೋಗದ ವರದಿ ನೀಡಿತ್ತು. ಅದರ ಬದಲು, ಜನರ ಸುಲಿಗೆ ಮಾಡುವ ಸಾರ್ವತ್ರಿಕ ಆರೋಗ್ಯ ವಿಮೆ ನೀತಿಯನ್ನು ಇಂದಿನ ಸರ್ಕಾರಗಳು ಪೋಷಿಸುತ್ತವೆ. ಆದ್ದರಿಂದ ನಾವು ಇಂದು ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ಸೇವೆ ದೊರಕಬೇಕು, ಆರೋಗ್ಯ ನಮ್ಮ ಮೂಲಭೂತ ಹಕ್ಕು ಎಂಬ ಘೋಷಣೆಗಳೊಂದಿಗೆ ಹೋರಾಟವನ್ನು ಬಲಪಡಿಸಬೇಕು ಎಂದರು.
ಪ್ರಸಕ್ತ ವಿದ್ಯಮಾನಗಳ ವಿಶ್ಲೇಷಕ ಹಾಗೂ ಪ್ರಖ್ಯಾತ ಆಹಾರ ತಜ್ಞ ಕೆ.ಸಿ. ರಘು ಅವರು ಮಾತನಾಡಿ, ನಮ್ಮದೇಶದ ಆರೋಗ್ಯದ ಸ್ಥಿತಿಗತಿಯ ಬಗ್ಗೆ ವಿವರಿಸಿದರು. ಜನನ ಸಂದರ್ಭದಲ್ಲಿನ ಶಿಶು ಮರಣ ಮತ್ತು ತಾಯಿ ಮರಣಗಳೇ ಒಂದು ಸಮಾಜದ ನಿಜವಾದ ಪ್ರಗತಿಯ ಒಳ್ಳೆಯ ಮಾಪಕ. ಇವೆರಡೂ ನಮ್ಮ ದೇಶದಲ್ಲಿ ಅತ್ಯಧಿಕವಾಗಿದೆ. ಕರ್ನಾಟಕದಲ್ಲಿ ಪ್ರತೀ ಒಂದು ಲಕ್ಷ ಹೆರಿಗೆಗಳಲ್ಲಿ 92 ಜನ ತಾಯಂದಿರು ಸಾಯುತ್ತಿದ್ದಾರೆ. ಪ್ರತೀ 1000 ಮಕ್ಕಳಲ್ಲಿ 25 ಮಕ್ಕಳು ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಮುನ್ನವೇ ಸಾವನ್ನಪ್ಪುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯಕ್ಕಾಗಿ ದೇಶz ಜಿಡಿಪಿಯಲ್ಲಿ ಶೇಕಡಾ 2.5ರಷ್ಟು ಖರ್ಚು ಮಾಡಬೇಕು ಎಂದು ಅವರು ತಿಳಿಸಿದರು.
ನಮ್ಮ ದೇಶದಲ್ಲಿ ಕೇವಲ ಶೇಕಡಾ 1.2ರಷ್ಟು ಮಾತ್ರ! ಇದರಿಂದಾಗಿ ಅಗತ್ಯಕ್ಕೆ ತಕ್ಕಷ್ಟು ಆರೋಗ್ಯ ಸಿಬ್ಬಂದಿ ಮತ್ತು ಕಾರ್ಯಕರ್ತರು ಮತ್ತು ಚಿಕಿತ್ಸಾ ಸಲಕರಣೆಗಳು ನಮ್ಮಲ್ಲಿ ಲಭ್ಯವಿಲ್ಲ. ಐಎಂಎ ಹೇಳುವಂತೆ ನಮ್ಮ ದೇಶದಲ್ಲಿ ಒಟ್ಟು 10 ಲಕ್ಷ ಜನ ವೈದ್ಯರಿದ್ದಾರೆ. ಆದರೆ ಅವರ ಸೇವೆ ನಗರ ಕೇಂದ್ರಿತವಾಗಿದ್ದು, ಅದು ಕೇವಲ ಶೇ.20ರಷ್ಟು ನಾಗರಿಕರಿಗೆ ಮಾತ್ರ ಅದು ಲಭ್ಯವಾಗುತ್ತದೆ. ಗ್ರಾಮೀಣ ಪ್ರದೇಶದ ಪಿಎಚ್‍ಸಿ, ಸಿಎಚ್‍ಸಿ, ಸಬ್ ಸೆಂಟರ್‍ಗಳಲ್ಲಿ ಅವಶ್ಯಕ ಸಿಬ್ಬಂದಿಯೇ ಇಲ್ಲ. ದೆಹಲಿ ಆರೋಗ್ಯಕ್ಕಾಗಿ ತನ್ನ ಬಜೆಟ್‍ನ ಶೇ.13ರಷ್ಟು ಖರ್ಚು ಮಾಡಿದರೆ, ಕರ್ನಾಟಕ ಕೇವಲ ಶೇ.3ರಷ್ಟು ಮಾತ್ರ ವ್ಯಯಿಸುತ್ತಿದೆ. ಆದ್ದರಿಂದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಸರ್ಕಾರವನ್ನು ಹೋರಾಟಗಳ ಮೂಲಕ ಒತ್ತಾಯಿಸಬೇಕು ಎಂದು ಅವರು ವಿವರಿಸಿದರು.
ಎಐಡಿವೈಓ ಅಖಿಲ ಭಾರತ ಅಧ್ಯಕ್ಷರು ಹಾಗೂ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಅವರು ಸಮಾರೋಪ ಭಾಷಣ ಮಾಡಿ,ಸಮಾವೇಶದಲ್ಲಿ ಚರ್ಚಿಸಿರುವ ವಿಷಯಗಳನ್ನು ನಮ್ಮ ಹೋರಾಟಕ್ಕೆ ಅಳವಡಿಸಿಕೊಳ್ಳಬೇಕು. ನಮ್ಮ ಹೋರಾಟದ ಧ್ವನಿ ಗಟ್ಟಿಯಾಗಬೇಕು. ಕೋವಿಡ್‍ನಿಂದ ನಮ್ಮ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ ಎಂಬುದು ತಪ್ಪು, ಬದಲಾಗಿ ಹದಗೆಟ್ಟ ಆರೋಗ್ಯ ವ್ಯವಸ್ಥೆಯ ನೈಜಸ್ಥಿತಿ ಕೋವಿಡ್‍ನಿಂದ ಬಟಾಬಯಲಾಗಿದೆ. ವಾರ್ಷಿಕ 24ಲಕ್ಷ ಕೋಟಿ ರೂ.ಗಳ ತೆರಿಗೆಯನ್ನು ಕಟ್ಟುವ ಜನರ ಆರೋಗ್ಯಕ್ಕಾಗಿ ಸರ್ಕಾರವು ಪುಡಿಗಾಸನ್ನು ಖರ್ಚು ಮಾಡುತ್ತಿಲ್ಲ. ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಯುವಜನರು ಕೇವಲ ನಿಮ್ಮ ಉದ್ಯೋಗಕ್ಕಾಗಿ ಮಾತ್ರವಲ್ಲದೇ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಹೋರಾಟವನ್ನು ಕಟ್ಟಬೇಕಿದೆ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಐಡಿವೈಓ ರಾಜ್ಯಾಧ್ಯಕ್ಷೆ ಎಂ. ಉಮಾದೇವಿ ಅವರು ಮಾತನಾಡಿ, ಕೋವಿಡ್‍ನ ದಾಳಿಗಿಂತಲೂ ಆರೋಗ್ಯಕ್ಷೇತ್ರದ ಮೂಲ ಸೌಕರ್ಯದ ಕೊರತೆಯಿಂದಾಗಿಯೇ ನಮ್ಮ ದೇಶದಲ್ಲಿ ಅಪಾರವಾದ ಸಾವು-ನೋವುಗಳು ಸಂಭವಿಸಿವೆ. ಈ ಮಹಾಮಾರಿಯು ಯಾವ ಯುದ್ಧಕ್ಕಿಂತಲೂ ಅಧಿಕವಾದ ಪ್ರಾಣ ಹಾನಿಯನ್ನು ಮಾಡಿದೆ.ಮಾನವ ಸಂಪನ್ಮೂಲದ ಕೊರತೆಯೇ ಇದಕ್ಕೆಲ್ಲ ಪ್ರಮುಖ ಕಾರಣವಾಗಿದ್ದುಆರೋಗ್ಯ ಕ್ಷೇತ್ರಕ್ಕೆ ಸಮರೋಪಾದಿಯಲ್ಲಿ ನೇಮಕಾತಿ ನಡೆಯಬೇಕೆಂದು ನಾವು ಒತ್ತಾಯಿಸಬೇಕು ಎಂದರು.
ಸಮಾವೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಖಾಲಿ ಹುದ್ದೆಗಳನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಲು ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಮಂಡಿಸಲಾದ ಗೊತ್ತುವಳಿಗಳು ಅಂಗೀಕಾರವಾದವು. ನಂತರ ರಾಜದ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸುವ ನಿರ್ಧಾರವನ್ನು ಸಮಾವೇಶವು ಕೈಗೊಂಡಿತು. ಆನ್ಲೈನ್ ಸಮಾವೇಶದ ಕಾರ್ಯ ಕಲಾಪಗಳನ್ನು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ್ ಬಾಗೇವಾಡಿ ಅವರು ನಿರ್ವಹಿಸಿದರು.
ಆರೋಗ್ಯ ಇಲಾಖೆಯಲ್ಲಿ ಅಗತ್ಯವಿರುವ ಸಿಬ್ಬಂದಿಯನ್ನು ಸಮರೋಪಾದಿಯಲ್ಲಿ ನೇಮಕಾತಿ ಮಾಡಿಕೊಳ್ಳಿ. ತಜ್ಞ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸುವಂತೆ, ಆರೋಗ್ಯ ಇಲಾಖೆಯಲ್ಲಿ ದುಡಿಯುತ್ತಿರುವ ಎಲ್ಲ ಗುತ್ತಿಗೆ ನೌಕರರನ್ನು ಖಾಯಂಗೊಳಿಸುವಂತೆ, ಕೋವಿಡ್ ನಿರ್ವಹಣೆಗೆ ಎಲ್ಲ ಪಿಎಚ್‍ಸಿ ಮತ್ತು ಸಿಎಚ್‍ಸಿಗಳನ್ನು ಸಜ್ಜುಗೊಳಿಸುವಂತೆ, ಮೂರನೇ ಅಲೆಯನ್ನು ನಿಭಾಯಿಸಲು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಂತೆ, ಎಲ್ಲರಿಗೂ ಉಚಿತ ಲಸಿಕೆ ಒದಗಿಸುವಂತೆ, ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಭ್ರಷ್ಟಾಚಾರ-ಅವ್ಯವಹಾರಗಳಿಗೆ ಕಡಿವಾಣ ಹಾಕಿ. ಹಗರಣಗಳ ಸಮಗ್ರ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ, ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಿ, ಮತ್ತು ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸುವಂತೆ ಒತ್ತಾಯಿಸುವ ನಿರ್ಣಯಗಳನ್ನು ಸಮಾವೇಶದಲ್ಲಿ ಅಂಗೀಕರಿಸಲಾಯಿತು.