ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ

ಕಲಬುರಗಿ:ಎ.8: ಪೌಷ್ಠಿಕಾಂಶಗಳುಳ್ಳ ಆಹಾರ ಸೇವನೆ, ಶುದ್ಧವಾದ ನೀರನ್ನು ಕುಡಿಯುವುದು, ದಿನಕ್ಕೆ 7-8 ಗಂಟೆಗಳ ಕಾಲ ಗಾಡ ನಿದ್ರೆ, ನಿಯಮಿತವಾಗಿ ವ್ಯಾಯಾಮ, ಯೋಗ ಮಾಡುವುದು, ಸಕಾರಾತ್ಮಕ ಚಿಂತನೆ ಮಾಡುವುದು ಸೇರಿದಂತೆ ಮುಂತಾದ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಎಲ್ಲರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜವಾಬ್ದಾರಿಯಾಗಿದೆ ಎಂದು ಬಸವೇಶ್ವರ ಆಸ್ಪತ್ರೆಯ ತಜ್ಞ ವೈದ್ಯ ಡಾ.ವಿಶ್ವರಾಜ ಬಿ.ತಡಕಲ್ ಹೇಳಿದರು.

    ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯಿರುವ 'ತಡಕಲ್ ಸ್ಪೇಷಾಲಿಟಿ ಆಷ್ಪತ್ರೆ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶುಕ್ರವಾರ ಸಂಜೆ ಜರುಗಿದ 'ವಿಶ್ವ ಆರೋಗ್ಯ ದಿನಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
    ರೋಗ ಬಂದು ಔಷಧಿ ಸೇವನೆ, ಆಸ್ಪತ್ರೆಗೆ ತೆರಳುವ ಸಂದರ್ಭಕ್ಕೆ ಅವಕಾಶ ಮಾಡಿಕೊಡಬೇಡಿ. ಮನೆಯಲ್ಲಿ ತಯಾರಿಸಿದ ತಾಜಾ, ಪೌಷ್ಠಕಾಂಶಗಳುಳ್ಳ ಆಹಾರ, ತರಕಾರಿ, ಹಣ್ಣುಗಳನ್ನು ಸೇವಿಸಿ. ಶುದ್ದವಾದ ನೀರನ್ನು ಯತೇಚ್ಛವಾಗಿ ಕುಡಿಯಿರಿ. ಎಣ್ಣೆಯಲ್ಲಿ ಕರಿದ, ಬೇಯಿಸಿದ ಆಹಾರ, ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮಾಡಬೇಡಿ. ಅತಿಯಾದ ಮೋಬೈಲ್ ಬಳಕೆ, ಟಿ.ವಿ.ವೀಕ್ಷಣೆ ಬೇಡ ಎಂದು ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
   ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಪರಿಸರ ಮತ್ತು ಜೀವಿಗಳ ನಡುವೆ ಅನೋನ್ಯ ಹಾಗೂ ನೇರವಾದ ಸಂಬಂಧವಿದೆ. ಪರಿಸರದ ಮೇಲಿನ ಮಾನವನ ದಬ್ಬಾಳಿಕೆಯಿಂದ ಅದು ಅಸಮತೋಲನವಾಗಿ ವಿವಿಧ ರೀತಿಯ ಹೊಸ ರೋಗಗಳು ಹುಟ್ಟುತ್ತಿವೆ. ಈ ರೋಗಗಳು ಮಾನವ ಸೇರಿದಂತೆ ವಿವಿಧ ಜೀವಿಗಳ ಮೇಲೆ ನೇರವಾದ ದುಷ್ಟರಿಣಾಮ ಉಂಟುಮಾಡುತ್ತಿವೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಪಾಡುವುದರ ಜೊತೆಗೆ ಪರಿಸರವನ್ನು ಕಾಪಾಡಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
   ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ವೀರೇಶ ಬೋಳಶೆಟ್ಟಿ ನರೋಣಾ, ದೇವೇಂದ್ರಪ್ಪ ಗಣಮುಖಿ, ಚನ್ನು ಹುಲಿಪಾಟೀಲ, ಶಿಲ್ಪಾ ರಾಠೋಡ ಸೇರಿದಂತೆ ಇನ್ನಿತರರು ಇದ್ದರು.