ಆರೋಗ್ಯ ಇಲಾಖೆ ತಮ್ಮ ಕಾರ್ಯವೇಗ ಹೆಚ್ಚುಗೊಳಿಸಿ


ಪುತ್ತೂರು, ಎ.೨೦- ಕೊರೋನ ೨ನೇ ಅಲೆ ವೇಗವಾಗಿ ಬೆಳೆಯುತ್ತಿದ್ದು, ಅದರ ನಿಯಂತ್ರಣ ಕಾರ್ಯವೂ ಅಷ್ಟೇ ವೇಗವಾಗಿ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಪ್ರಮುಖ ಇಲಾಖೆಗಳು ತಮ್ಮ ಕಾರ್ಯವೇಗವನ್ನು ಹೆಚ್ಚುಗೊಳಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಂಜೆ ಕೊರೊನಾ ಸ್ಥಿತಿ ಅವಲೋಕನಾ ತುರ್ತು ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಕೊರೊನಾದ ಅಪಾಯಕಾರಿ ಬೆಳವಣಿಗೆಯ ಬಗ್ಗೆ ಪ್ರಸ್ತಾಪಿಸಿದ ಶಾಸಕರು ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಕಾಯೋನ್ಮುಖರಾಗುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಕೋವಿಡ್ ಬಗ್ಗೆ ಮಾಹಿತಿ ನೀಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವರು ತಾಲೂಕಿಗೆ ಕೋವಿಡ್ ಲಸಿಕೆ ೪೦೦೦ ಲಸಿಕೆ ಬಂದಿದ್ದು, ಅದನ್ನು ತಾಲೂಕಿನ ೧೨ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ೨ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹಂಚಲಾಗಿದೆ. ಬಂದಿರುವ ಲಸಿಕೆಗಳು ಇದೀಗ ಎಲ್ಲಾ ಹಂಚಲಾಗಿದೆ ಎಂದರು. ಪುತ್ತೂರು ತಾಲೂಕಿನಲ್ಲಿ ಏಪ್ರಿಲ್ ತಿಂಗಳಾರಂಭದಿಂದ ಕೋವಿಡ್ ಪ್ರಕರಣಗಳು ಹೆಚ್ಚಲಾರಂಭಿಸಿವೆ. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ೧೨ ಪ್ರಕರಣಗಳೂ ಸೇರಿದಂತೆ ತಾಲೂಕಿನಲ್ಲಿ ೬೨ ಪ್ರಸ್ತುತ ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇವರಲ್ಲಿ ೧೨ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೫೦ ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ತಾಲೂಕಿನಲ್ಲಿ ೬೦ ವರ್ಷಕ್ಕಿಂತ ಮೇಲ್ಪಟ್ಟ ೨೭,೦೦೦ ಮಂದಿ ಇದ್ದಾರೆ. ೪೫ ವರ್ಷಕ್ಕಿಂತ ೫೯ ವರ್ಷದವರೆಗಿನವರು ೫೮,೦೦೦ ಮಂದಿ ಇದ್ದಾರೆ. ೬೦ಕ್ಕಿಂತ ಮೇಲ್ಪಟ್ಟವರ ಪೈಕಿ ೫೦ ಶೇಕಡಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ಸಭೆಗೆ ತಿಳಿಸಿದರು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದ್ದು, ನೋಡೆಲ್ ಅಧಿಕಾರಿಗಳ ನೇಮಕವಾಗಿದೆ. ಇವರೆಲ್ಲರೂ ಬುಧವಾರದ ಒಳಗೆ ಸಭೆ ನಡೆಸಿ ಸಮರೋಪಾದಿಯ ಕೆಲಸ ಮಾಡಬೇಕು. ಲಸಿಕೆ ಪಡೆಯಲು ಅರ್ಹತೆ ಇರುವವರ ಪಟ್ಟಿ ತಯಾರಿಸಿ ೧ ತಿಂಗಳಲ್ಲಿ ಗುರಿ ಈಡೇರುವಂತೆ ನೋಡಿಕೊಳ್ಳಬೇಕು. ಕೊರೊನಾ ಹರಡಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಯಾದಂತೆ ಕೊರೊನಾ ತಡೆ ಅಭಿಯಾನ ಯಶಸ್ವಿಯಾಗಲು ಎಲ್ಲರೂ ಸಹಾಯ ಮಾಡಬೇಕು ಎಂದು ಶಾಸಕರು ಸೂಚಿಸಿದರು. ಸಭೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ತಹಸೀಲ್ದಾರ್ ರಮೇಶ್ ಬಾಬು, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ನಗರಸಭಾ ಆಯುಕ್ತೆ ರೂಪಾ ಟಿ ಶೆಟ್ಟಿ, ಉಪಸ್ಥಿತರಿದ್ದರು.