ಆರೋಗ್ಯ ಇಲಾಖೆ ಕಾರ್ಯವೈಖರಿಗೆ ಶಿವಾನಂದ ಪಾಟೀಲ್ ಗರಂಃ ಆರೋಗ್ಯ ಇಲಾಖೆ ಅಧೋಗತಿಗೆ

ವಿಜಯಪುರ, ಅ.25-ಕೋವಿಡೇತರ ರೋಗಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತಾಳಿದೆ, ಆರೋಗ್ಯ ಇಲಾಖೆ ಸಂಪೂರ್ಣ ಅಧೋಗತಿಗೆ ಇಳಿದಿದೆ ಎಂದು ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‍ಗೆ ನೀಡಿದ ಆದ್ಯತೆಯಷ್ಟು ನಾನ್ ಕೋವಿಡ್ ರೋಗಗಳಿಗೆ ಆದ್ಯತೆ ದೊರಕಿಸುತ್ತಿಲ್ಲ. ವಿಜಯಪುರದ ಒಂದೇ ಉದಾಹರಣೆ ಅವಲೋಕಿಸಿದರೆ, ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಹೊರರೋಗಿಗಳ ಸಂಖ್ಯೆ ಪ್ರತಿದಿನ 1500ಕ್ಕೂ ಹೆಚ್ಚಾಗಿರುತ್ತಿತ್ತು, ಆದರೆ ಈ ಸಂಖ್ಯೆ ಗಣನೀಯವಾಗಿ ತಗ್ಗಿದೆ, ಬಡರೋಗಿಗಳಿಗೆ ಆರೋಗ್ಯ ಸೇವೆ ದೊರಕುತ್ತಿಲ್ಲ ಎಂದರು.
ಆರೋಗ್ಯ ಇಲಾಖೆ ದೊಡ್ಡ ನಿರ್ಲಕ್ಷ್ಯ ಮಾಡುತ್ತಿದೆ, ಕೋವಿಡ್ ಪರಿಸ್ಥಿತಿ ನಿಭಾಯಿಸುವ ಭರದಲ್ಲಿ ಉಳಿದ ರೋಗಗಳಿಂದ ಬಳಲುವ ರೋಗಿಗಳಿಗೆ ಕೇಳುವವರೇ ಗತಿ ಇಲ್ಲದಂತಾಗಿದೆ, ಕ್ಯಾನ್ಸರ್, ಕಿಡ್ನಿ ವೈಫಲ್ಯ, ಮಧುಮೇಹ ಮೊದಲಾದ ರೋಗ ಸಮಸ್ಯೆ ಎದುರಿಸುತ್ತಿರುವ ಬಡ ರೋಗಿಗಳು ಎಲ್ಲಿ ಹೋಗಿ ಚಿಕಿತ್ಸೆ ಪಡೆಯಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ, ಉಳಿದ ರೋಗಗಳಿಗೆ ಅಲ್ಲಿ ಸಮರ್ಪಕವಾದ ಚಿಕಿತ್ಸೆ ದೊರಕುತ್ತಿಲ್ಲ, ಆರೋಗ್ಯ ಇಲಾಖೆ ಕೂಡಲೇ ಕೋವಿಡ್ ಡೆತ್ ಹಾಗೂ ನಾನ್ ಕೋವಿಡ್ ಡೆತ್‍ಗಳ ನಿಖರವಾದ ಸಂಖ್ಯೆಯನ್ನು ಬಹಿರಂಗಪಡಿಸಬೇಕು,
ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ, ಈ ರೀತಿ ನಿಭಾಯಿಸುತ್ತಾರೆ ಎಂದು ನಾನೂ ಸಹ ನಿರೀಕ್ಷಿಸಿರಲಿಲ್ಲ ಎಂದರು.
ಹಾರನಹಳ್ಳಿ ರಾಮಸ್ವಾಮಿ ಶಿಫಾರಸ್ಸು ಅನುಷ್ಠಾನಗೊಳಿಸಿಃ ವಿನಾಕಾರಣ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಬೇರ್ಪಡಿಸಲಾಗಿದೆ, ಇದೇ ತೆರನಾಗಿ ಅನೇಕ ಇಲಾಖೆಗಳನ್ನು ಬೇರ್ಪಡಿಸಲಾಗಿದೆ, ದಿ.ಹಾರನಹಳ್ಳಿ ರಾಮಸ್ವಾಮಿ ಅವರ ವರದಿ ಇಲಾಖೆಗಳನ್ನು ಸಮನ್ವಯಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ, ಆದರೂ ಸಹ ಯಾರೇ ಬಂದರೂ ಇದಕ್ಕೆ ಆದ್ಯತೆ ನೀಡುತ್ತಿಲ್ಲ, ಕೇವಲ ಐದು ವರ್ಷ ಸರ್ಕಾರ ಪೂರೈಸಿದರೆ ಸಾಕು ಅದೇ ದೊಡ್ಡ ಸಾಧನೆ ಎಂದು ಅಷ್ಟಕ್ಕೆ ಸೀಮಿತವಾಗುತ್ತಿದ್ದಾರೆ.
ಮಂತ್ರಿ ಸ್ಥಾನ ಕೊಡಲು ಅನೇಕ ಇಲಾಖೆಯನ್ನು ಒಡೆಯಲಾಗಿದೆ, ಸಹಕಾರ ಇಲಾಖೆಯಲ್ಲಿದ್ದ ಸಕ್ಕರೆ ವಿಭಾಗವನ್ನು ಬೇರೆ ಮಾಡಿ ಪ್ರತ್ಯೇಕ ಸಚಿವಾಲಯ ತೆರೆದರು ಇದು ಸರಿಯಲ್ಲ ಎಂದರು.
ಬಿಹಾರ ರಾಜ್ಯದ ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಕೊರೊನಾ ಲಸಿಕೆ ಎಂಬ ಮಾತು ನೀಡಿರುವುದು ಬಿಜೆಪಿಯ ಸಣ್ಣತನಕ್ಕೆ ಉದಾಹರಣೆ ಎಂದರು.
ಭೀಕರ ನೆರೆಯಿಂದಾಗಿ ಈ ಭಾಗದ ರೈತರ ಬದುಕು ದುಸ್ತರವಾಗಿದೆ, ಕೊರೊನಾ, ಈಗ ಪ್ರವಾಹದಿಂದ ರೈತರು ಕಣ್ಣೀರು ಸುರಿಸುವಂತಾಗಿದೆ, ಈರುಳ್ಳಿ, ಲಿಂಬೆ, ದ್ರಾಕ್ಷಿ, ಗೋದಿ, ಜೋಳ ಹೀಗೆ ಯಾವುದೇ ಬೆಳೆಗೂ ಸೂಕ್ತ ಬೆಲೆ ದೊರಕುತ್ತಿಲ್ಲ ಎಂದರು.