ಆರೋಗ್ಯ ಆವಿಷ್ಕಾರ: 46 ನೂತನ ಪಿ.ಎಚ್.ಸಿ ನಿರ್ಮಾಣ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯಸಿಂಗ್ ಘೋಷಣೆ

ಕಲಬುರಗಿ,ಮಾ. 2: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸುಮಾರು 300 ಕೋಟಿ ರೂ. ಖರ್ಚು ಮಾಡುವ ಆರೋಗ್ಯ ಆವಿಷ್ಕಾರ ಯೋಜನೆ ರೂಪಿಸಲಾಗಿದ್ದು, ಇದರ ಅಡಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ 46 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.
ಇಲ್ಲಿನ ಕೆ.ಕೆ.ಆರ್.ಡಿ.ಬಿ ಆಡಳಿತ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಒಟ್ಟು 46 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 33 ಕೆ.ಕೆ.ಆರ್.ಡಿ.ಬಿ ವತಿಯಿಂದ ಹಾಗೂ ಉಳಿದ 13 ಕೇಂದ್ರಗಳಿಗೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಖನಿಜ ನಿಧಿ ಬಳಸಿಕೊಂಡು ನಿರ್ಮಿಸಲಾಗುವುದು ಎಂದರು.
ಪ್ರತಿ ಪಿ.ಎಚ್.ಸಿ. ನಿರ್ಮಾಣಕ್ಕೆ ಕನಿಷ್ಠ ರೂ.5 ಕೋಟಿ ವೆಚ್ಚವಾಗಲಿದೆ. ಮುಂದಿನ ಮೂರು ತಿಂಗಳಲ್ಲಿ ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.
ಮುಂದಿನ ಹಣಕಾಸು ವರ್ಷದಲ್ಲಿ ಪುನಃ 32 ಪಿ.ಎಚ್.ಸಿ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಡಾ.ಅಜಯಸಿಂಗ್ ನುಡಿದರು.
ಆರೋಗ್ಯ ಸೌಧ ನಿರ್ಮಾಣ
ಪ್ರಸ್ತುತ ಜಯದೇವ ಹೃದ್ರೋಗ ಸಂಶೋಧನಾ ಕೇಂದ್ರದ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿರುವ ಸ್ಥಳದ ಹಿಂಭಾಗದಲ್ಲಿ ಆರೋಗ್ಯ ಇಲಾಖೆಯ ಎಲ್ಲ ಕಟ್ಟಡಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಅನುಕೂಲ ಆಗುವಂತೆ ಆರೋಗ್ಯ ಸೌಧ ನಿರ್ಮಿಸಲಾಗುತ್ತಿದೆ ಎಂದು ಡಾ.ಅಜಯಸಿಂಗ್ ಪ್ರಕಟಿಸಿದರು.
ಈ ಉದ್ದೇಶಕ್ಕಾಗಿ ಕೆ.ಕೆ.ಆರ್.ಡಿ.ಬಿ ವತಿಯಿಂದ ರೂ.10 ಕೋಟಿ ಹಾಗೂ ಆರೋಗ್ಯ ಇಲಾಖೆಯ ರೂ.18 ಕೋಟಿ ಸೇರಿಸಿ ಒಟ್ಟು 18 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನು ಜಯದೇವ ಆಸ್ಪತ್ರೆ ಲೋಕಾರ್ಪಣೆಗೊಂಡ ನಂತರ ಕೆ.ಕೆ.ಆರ್.ಡಿ.ಬಿಯಿಂದ ರೂ. 16 ಕೋಟಿ 40 ಲಕ್ಷ ವೆಚ್ಚದಲ್ಲಿ 48 ಆಂಬ್ಯುಲೆನ್ಸ್ ಖರೀದಿಸಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಕಾರ್ಯನಿರ್ವಹಿಸಲಾಗುವುದು ಎಂದು ವಿವರಿಸಿದರು.
ಈ ಪೈಕಿ ತಲಾ ಒಂದು ಹಾರ್ಟ್ ಲೈನ್ ಆಂಬ್ಯುಲೆನ್ಸ್ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ತಾಲೂಕು ಕೇಂದ್ರದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಹೃದಯಾಘಾತಕ್ಕೆ ಈಡಾಗುವ ವ್ಯಕ್ತಿಗಳನ್ನು ಈ ಆಂಬ್ಯುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆ ಹಾಗೂ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಜನರಿಗೆ ಅನುಕೂಲ ಆಗುವಂತೆ ಮುಂದಿನ ಎರಡು ತಿಂಗಳಲ್ಲಿ ಹಾರ್ಟ್ ಲೈನ್ ಆಂಬ್ಯುಲೆನ್ಸ್ ಬಳಕೆಗೆ ಪೂರಕವಾಗಿ ಕೆ.ಕೆ.ಆರ್.ಡಿ.ಬಿ ವತಿಯಿಂದ ಆ್ಯಪ್ ಅಭಿವೃದ್ಧಿಪಡಿಸಲಾಗುವುದು ಎಂದರು.
ಜೊತೆಗೆ, ಕಲ್ಯಾಣ ಕರ್ನಾಟಕ ಭಾಗದ ಮಹಿಳೆಯರ ಸಮಗ್ರ ಆರೋಗ್ಯದ ದೃಷ್ಟಿಯಿಂದ ರೂ.2 ಕೋಟಿ ಖರ್ಚು ಮಾಡಿ ಮಂಡಳಿ ವತಿಯಿಂದ ಮೆನ್ಸ್ ಟ್ರುವಲ್ ಕಪ್ ಗಳನ್ನು ಖರೀದಿಸಲಾಗುತ್ತಿದೆ. ಅಲ್ಲದೆ, ಮಹಿಳೆಯರಿಗೆ ಗರ್ಭ ಕಂಠದ (ಸರ್ವೈಕಲ್) ಕ್ಯಾನ್ಸರ್ ಕಾಡದಂತೆ ಮಂಡಳಿಯಿಂದ ಲಸಿಕೆ ಒದಗಿಸುವ ಕುರಿತು ಚಿಂತನೆ ನಡೆದಿದೆ ಎಂದು ನುಡಿದರು.
ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಸುಂದರೇಶ ಬಾಬು, ಉಪ ಕಾರ್ಯದರ್ಶಿ ಪ್ರಮೀಳಾ ಕಡೇಚೂರ್ ಇದ್ದರು.