ಆರೋಗ್ಯಾಧಿಕಾರಿ ವಿರುದ್ಧ ಕ್ರಮಕ್ಕೆಆಗ್ರಹಿಸಿ ಮೇ ೧೫ ಪ್ರತಿಭಟನೆ

ಬೆಂಗಳೂರು, ಮೇ.೩-ಸಾರ್ವಜನಿಕರ ತೆರಿಗೆ ಹಣ ವಂಚನೆಯಲ್ಲಿ ಭಾಗಿಯಾಗಿರುವ ಪೂರ್ವ ವಲಯದ ಆರೋಗ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೇ.೧೫ ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

ಪೂರ್ವ ವಲಯದ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂ. ವಂಚಿಸಿ ದ್ರೋಹ ಮಾಡಿರುವ ಆರೋಗ್ಯ ವೈದ್ಯಾಧಿಕಾರಿಗಳನ್ನು ಬಂಧಿಸಬೇಕು ಎಂದು ನಾವು ಈಗಾಗಲೇ ಜಂಟಿ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದ್ದೇವೆ ಎಂದು ಸಂಘದ ಅಧ್ಯಕ್ಷ ಅಮೃತ್‌ರಾಜ್ ತಿಳಿಸಿದ್ದಾರೆ.

ಪೂರ್ವ ವಲಯದ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದಿರುವ ಈ ಕರ್ಮಕಾಂಡದಲ್ಲಿ ಅಲ್ಲಿನ ಹಿರಿಯ ಅಧಿಕಾರಿಯೊಬ್ಬರ ಪುತ್ರನ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.

ಅಲ್ಲಿನ ಕೆಲ ಅಧಿಕಾರಿಗಳು ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ರೂ.ಗಳನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಿ ನಂತರ ಬೇನಾಮಿ ವ್ಯಕ್ತಿಗಳಿಂದ ಹಣ ಪಡೆದು ಮೋಜು ಮಸ್ತಿ ಮಾಡುತ್ತಿರುವ ಬಗ್ಗೆ ನಮಗೆ ದಾಖಲೆಗಳು ಲಭ್ಯವಾಗಿದೆ.

ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಹಗಲು ಇರುಳು ಎನ್ನದೆ ತೆರಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಆರೋಗ್ಯ ವಿಭಾಗದ ಅಕಾರಿಗಳು ತೆರಿಗೆ ಹಣದಲ್ಲಿ ವಂಚನೆ ಮಾಡಿ ಮೋಜು ಮಸ್ತಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಹೀಗಾಗಿ ನಾವು ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಪೂರ್ವ ವಲಯದಲ್ಲಿ ಯಾವುದೇ ರೀತಿಯ ತೆರಿಗೆ ವಸೂಲಿ ಮಾಡದಿರಲು ತೀರ್ಮಾನಿಸಿದ್ದೇವೆ ಎಂದು ಅವರು ವಿವರಣೆ ನೀಡಿದ್ದಾರೆ.

ಆರೋಗ್ಯಾಧಿಕಾರಿಗಳ ಕರ್ಮಕಾಂಡದ ಬಗ್ಗೆ ಸ್ಪಷ್ಟ ಮಾಹಿತಿ ಬೇಕಾದರೆ ಆ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮೊಬೈಲ್ ಪರಿಶೀಲನೆ ನಡೆಸಿದರೆ ಸತ್ಯಾಂಶ ಹೊರ ಬರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಅಕ್ರಮ ನಡೆಸುತ್ತಿರುವ ತಪ್ಪಿತಸ್ಥರನ್ನು ಈ ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಮೃತ್‌ರಾಜ್ ಆಗ್ರಹಿಸಿದ್ದಾರೆ.

ನಮ್ಮ ಬೇಡಿಕೆ ಈಡೇರದಿದ್ದರೆ ಚುನಾವಣೆ ಮುಗಿದ ನಂತರ ಮೇ.೧೫ ರಂದು ಪೂರ್ವ ವಲಯದ ಕಚೇರಿ ಇರುವ ಮೆಯೋ ಹಾಲ್ ನೂರಾರು ಬಿಬಿಎಂಪಿ ಸಿಬ್ಬಂದಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ದೇಣಿಗೆ ಸಂಗ್ರಹ..!

ಪೂರ್ವ ವಲಯದ ಆರೋಗ್ಯ ಇಲಾಖೆಯ ಅಧಿಕಾರಿಗಳು ವಿಧಾನಸಭಾ ಚುನಾವಣೆಗೆ ಸ್ರ್ಪಸಿರುವ ಕೆಲವು ಶಾಸಕರುಗಳಿಗೆ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ ಎಂದು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಧ್ಯಕ್ಷ ಜೋಸೆಫ್ ಎಂಬುವರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.

ಅವರು ತಮ್ಮ ದೂರಿನಲ್ಲಿ ಆರೋಗ್ಯ ಇಲಾಖೆಯ ಕೆಲ ಅಕಾರಿಗಳು ಕೆಲವು ಅಭ್ಯರ್ಥಿಗಳಿಗೆ ಹೊಂದಾಣಿಕೆ ಮಾಡುವ ಉದ್ದೇಶದಿಂದ ತಲಾ ಒಂದು ಆರೋಗ್ಯ ವೈದ್ಯಾಧಿಕಾರಿ ಕಚೇರಿಗಳಿಂದ ಡಾಕ್ಯುಮೆಂಟೇಷನ್ ಹೆಸರಿನಲ್ಲಿ ತಲಾ ೨ ಲಕ್ಷ ರೂ.ಗಳ ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂಬ ದೂರಿನಲ್ಲಿ ಉಲ್ಲೇಖಿಸಿದ್ದಾರೆ.