ಆರೋಗ್ಯ,ಸೌಂದರ್ಯವರ್ಧಕ ಸವತೆಕಾಯಿ

ಕಲಬುರಗಿ ಜೂ 19: ಸವತೆಯ ಒಂದು ಜನಪ್ರಿಯ ತರಕಾರಿಯಾಗಿದ್ದು ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿ ಅಧಿಕವಾಗಿ ಬೆಳೆಯಲಾಗುತ್ತಿದೆ.
ಸವತೆಯು ಸಂಧಿವಾತ ರೋಗಕ್ಕೆ ಕಾರಣವಾದ ಯುರಿಕ್ ಆ್ಯಸಿಡನ್ನು
ದೇಹದಿಂದ ಹೊರಹಾಕುವುದರಿಂದ ಸಂಧಿವಾತ ಮತ್ತು ಮೂತ್ರಕೋಶ
ಸಂಬಂಧಿತ ರೋಗನಿವಾರಣೆ ಮಾಡುವುದರಲ್ಲಿ ಪ್ರಮುಖ ಪಾತ್ರ
ವಹಿಸುತ್ತದೆ. ಮಧುಮೇಹಿಗಳಿಗೆ ಸವತೆಯು ಒಂದು ಉತ್ತಮ
ಆಹಾರವಾಗಿದೆ. ಶ್ವಾಸನಾಳ, ಎದೆ ಹಾಗೂ ಹೊಟ್ಟೆಗೆ ಸಂಬಂಧ ಪಟ್ಟ
ತೊಂದರೆಗಳಿಗೆ ಸವತೆಯು ರಾಮಬಾಣವಾಗಿದೆ. ಸವತೆಯಲ್ಲಿನ ಪೊಟ್ಯಾಷಿಯಂ ರಕ್ತದೊತ್ತಡ ಹಾಗೂ ಸ್ನಾಯುಗಳ ಬಲವರ್ಧನೆಯಲ್ಲಿ,ಮ್ಯಾಗ್ನೆಷಿಯಂ ದೇಹದ ರಕ್ತ ಸಂಚಲನೆಗೆ, ಸ್ನಾಯ ಮತ್ತು ನರಗಳ ಚೇತರಿಕೆಗೆ ಸಹಾಯವಾಗುತ್ತದೆ. ಸವತೆಯಲ್ಲಿರುವನಾರಿನಾಂಶ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಮಲಬದ್ಧತೆ ತೊಂದರೆಯನ್ನು ನಿವಾರಿಸುತ್ತದೆ. ಗೋಲಾಕಾರದ ಸವತೆಯ ಚೂರುಗಳನ್ನು ಕಣ್ಣಿನ ಮೇಲೆ
ಇಡುವುದರಿಂದ ಕಣ್ಣಿನ ಬಾವು ಮತ್ತು ಉರಿತವನ್ನು ಶಮನಗೊಳಿಸಬಹುದು.
ಸವತೆ ಬೀಜದ ಪುಡಿಯನ್ನು ಹೊಟ್ಟೆಯಲ್ಲಿರುವ ಜಂತು ಮತ್ತು
ಲಾಡಿಹುಳಗಳ ನಿವಾರಣೆ ಮಾಡುತ್ತದೆ. ಸವತೆಯಲ್ಲಿರುವ ‘ಈರಿಪ್ಸಿನ್’ ಎಂಬ ಎನ್‍ಜೈಮ್ ಪ್ರೋಟೀನ್ ಪಚನಕ್ರಿಯೆಯಲ್ಲಿ ಸಹಕಾರಿಯಾಗಿದೆ. ಹಲ್ಲು ಮತ್ತು ವಸಡೆಯ ಸಂಬಂಧಿಸಿದ ರೋಗ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿದೆ.
ಸೌಂದರ್ಯವರ್ಧಕ ಸವತೆ:
ಸವತೆಯಲ್ಲಿ ಸಿಲಿಕಾ ಹೇರಳವಾಗಿರುವುದರಿಂದ ಚರ್ಮಕಾಂತಿಯುಕ್ತವಾಗಿಟ್ಟು, ಚರ್ಮದ ನೆರಿಗೆಗಳನ್ನುತಡೆಗಟ್ಟುತ್ತದೆ. ಸವತೆ ರಸದೊಂದಿಗೆ ಹಕ್ಕರಿಕೆ ಅಥವಾ ಪಾಲಕ್ ರಸದೊಂದಿಗೆ ಸೇವಿಸುವುದರಿಂದ ದಪ್ಪ ಮತ್ತು ಕಪ್ಪಾದ ಕೂದಲ ಬೆಳವಣಿಗೆಗೆ ನೆರವಾಗುತ್ತದೆ.ಮಲಗುವ ಮುನ್ನ ಗೋಲಾಕಾರವಾಗಿ ಹೆಚ್ಚಿದ ಸವತೆಕಾಯಿಯನ್ನು ಕಣ್ಣಿನ ಮೇಲೆ ದಿನಾಲೂ ಇಡುವುದರಿಂದ ಕಣ್ಣಿನ ಕೆಳ ಭಾಗದ ಕಪ್ಪನ್ನು ಹೋಗಲಾಡಿಸಬಹುದು, ಕಣ್ಣು ಬೇನೆ ಮತ್ತು ಕಣ್ಣಚಿಟ್ಟಲೆಯನ್ನು ಹೋಗಲಾಡಿಸುತ್ತದೆ. ಸವತೆಯ ರಸವನ್ನು ದಿನಾಲೂ ಲೇಪನ ಮಾಡುವುದರಿಂದ ಮೊಡವೆ, ಬೊಬ್ಬೆ, ಸುಟ್ಟಗಾಯ, ಸೂರ್ಯನ ಶಾಖದಿಂದಾಗುವ ಚರ್ಮದ ಉರಿತವನ್ನು ಶಮನಗೊಳಿಸುತ್ತದೆ. ಸವತೆಕಾಯಿಯನ್ನು ದಿನಾಲೂ ಸೇವಿಸುವುದರಿಂದ ದೇಹದ ತೂಕವನ್ನು ಕಡಿಮೆಮಾಡಬಹುದು.
ಸವತೆಕಾಯಿಯ ಮೇಲಿನ ಸಿಪ್ಪೆಯಲ್ಲಿ ಅಧಿಕ ಪ್ರಮಾಣದಲ್ಲಿ ಎ ಜೀವಸತ್ವ
ಇರುವುದರಿಂದ ಯಾವಾಗಲೂ ಸಿಪ್ಪೆಯನ್ನು ತೆಗೆಯದೆ ಉಪಯೋಗಿಸುವುದು ಒಳ್ಳೆಯದು. ಹೆಚ್ಚಿನ ಪೋಷಕಾಂಶಗಳ ನಾಶವನ್ನು
ಕಡಿಮೆಮಾಡಲು ಸವತೆಕಾಯಿಯನ್ನು ತಿನ್ನುವ(ಉಪಯೋಗಿಸುವ)
ಸಮಯದಲ್ಲಿಯೇ ಕತ್ತರಿಸಿ ಬಳಸಬೇಕು.
-ಶೀಲಾ ದುದ್ದಗಿ, ವಿಜ್ಞಾನಿ, ವ.ಕೃ.ಸಂ.ಕೇ., ಕಲಬುರಗಿ
ಮತ್ತು ಮಲ್ಲಮ್ಮ ದುದ್ದಗಿ, ಆಹಾರ ತಜ್ಞ, ರಿಮ್ಸ್, ರಾಯಚೂರು