ಆರೋಗ್ಯವಾಗಿರುವೆ ಆತಂಕ ಬೇಡ ಹಂಸಲೇಖ ಸ್ಪಷ್ಟನೆ

ಬೆಂಗಳೂರು,ನ.೨೪-ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖರವರ ಆರೋಗ್ಯ ಹದಗೆಟ್ಟ ಬಗ್ಗೆ ಹಬ್ಬಿದ್ದ ಸುಳ್ಳು ವದಂತಿಗೆ ಸೃಷ್ಟೀಕರಣ ನೀಡಿ ನಾನು ಕ್ಷೇಮವಾಗಿರುವೆ ಯಾರು ಆತಂಕಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಕ್ಷೇಮವಾಗಿದ್ದು, ಯಾರು ಭಯ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ರೀತಿಯ ಭದ್ರತೆಯನ್ನು ನೀಡಿದೆ ಹಾಗೂ ಲಕ್ಷಾಂತರ ಅಭಿಮಾನಿಗಳು ನನಗೆ ಧೈರ್ಯ ತುಂಬಿದ್ದಾರೆ ಎಂದು ನಾದ ಬ್ರಹ್ಮ ಹಂಸಲೇಖ ತಿಳಿಸಿದ್ದಾರೆ.
ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಸಲೇಖ ಅವರು ಮಾಡಿರುವ ಪೋಸ್ಟ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಪೂಜ್ಯ ಕರ್ನಾಟಕವೇ.. ನಾನು ಆರೋಗ್ಯವಾಗಿದ್ದೇನೆ. ನನಗೆ ಆರೋಗ್ಯ ತಪ್ಪಿದೆ ಎಂದು ಇಡೀ ಕರ್ನಾಟಕದಿಂದ ಕರೆಗಳು ಬರುತ್ತಿವೆ. ಎಲ್ಲರೂ ಆರೋಗ್ಯದ ಕುರಿತು ವಿಚಾರಿಸುತ್ತಿದ್ದಾರೆ. ನನಗೆ ಗೊತ್ತಾಗಿದೆ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು. ಈ ಪ್ರೀತಿಯನ್ನು ಪಡೆಯೋಕೆ ನಾನು ತುಂಬಾನೇ ಸವೆದಿದ್ದೀನಿ, ಸಹಿಸಿದ್ದೀನಿ, ಇದರ ಸುಖ ಇವತ್ತು ಅನುಭವಿಸುತ್ತಿದ್ದೀನಿ.
ನಾನು ಕೇಳದೆ ನನ್ನ ಮನೆಗೆ ಸರ್ಕಾರ ಭದ್ರತೆಯನ್ನು ಕೊಟ್ಟಿದೆ. ಇಡೀ ಕರ್ನಾಟಕದ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರವಾಗಿ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸಿದ್ದಾರೆ.
ಅಭಿಮಾನ ಆವೇಶವಾಗಬಾರದು, ಆವೇಶ ಅವಗಢಗಳಿಗೆ ಕಾರಣವಾಗಬಾರದು. ಅಭಿಮಾನ ಹಾಡಿನಂತಿರಬೇಕು. ಹಾಡು ಕೇಳಿಸುತ್ತದೆ. ಹಾಡು ಮುಟ್ಟುಸುತ್ತದೆ ಎಂದು ಹಂಸಲೇಖ ಅವರು ತಿಳಿಸಿದ್ದಾರೆ.