
ಭಾಲ್ಕಿ:ಮಾ.13: ಸಮಾಜದಲ್ಲಿಯ ಎಲ್ಲರೂ ಆರೋಗ್ಯವಾಗಿದ್ದರೆ, ದೇಶದ ಅಭಿವೃದ್ಧಿಗೆ ಕುಂದು ಬರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಅಬಕಾರಿ ಸಿಪಿಐ ಪ್ರೀತಿ ರಾಠೋಡ ಅಭಿಪ್ರಾಯಪಟ್ಟರು.
ಪಟ್ಟಣದ ಆರ್ಯಸಮಾಜ ಮಂದಿರದಲ್ಲಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ಯ, ಸ್ವಾಮಿ ವಿವೇಕಾನಂದ ಯುವ ಸಂಘ ಮತ್ತು ಮಹಿಳಾ ಕದಳಿ ವೇದಿಕೆ ವತಿಯಿಂದ ತಾಯಿ-ತಂಗಿಯರಿಗಾಗಿ ಮತ್ತು ಹಿರಿಯರು-ಮಕ್ಕಳಿಗಾಗಿ ರವಿವಾರ ಆಯೋಜಿಸಿದ್ದ ಯೋಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಯೋಗದಿಂದ ಆರೋಗ್ಯವಂತ ಬದುಕು ಕಂಡು ಕೊಳ್ಳಬಹುದು. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಯುವಸಂಘದವರು ಹೆಣ್ಣು ಮಕ್ಕಳಿಗೆ ಮತ್ತು ಹಿರಿಯರಿಗಾಗಿ ಆಯೋಜಿಸಿದ್ದ ಯೋಗ ಶಿಬಿರದ ಲಾಭ ಪಡೆಯಬೇಕು. ಯೋಗ ಮಾಡುವುದರಿಂದ ಸದೃಢ ಶರೀರ ಮತ್ತು ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು. ಯೋಗ ಶಿಬಿರದ ತರಬೇತು ದಾರರಾದ ಪ್ರಿಯಾ ಓಂ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಯೂರ್ವೇದ ವೈದ್ಯೆ ಡಾ| ಅಪರ್ಣಾ ವಿರಶೆಟ್ಟೆ ಮಾತನಾಡಿ, ಯೋಗ ಮತ್ತು ಆಯುರ್ವೇದ ಒಂದಕ್ಕೊಂದು ಹೋಂದಿಕೊಂಡಿವೆ. ಯೋಗ ಭಾರತೀಯ ಸಂಸ್ಕøತಿಯಾಗಿದೆ. ಯೋಗದಿಂದ ಆರೋಗ್ಯವಂತ ಜೀವನ ಕಂಡು ಕೊಳ್ಳಬಹುದು ಎಂದು ಹೇಳಿದರು. ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ಭಾಲ್ಕಿಯಲ್ಲಿ ಯೋಗ ಶಿಬಿರ ನಡೆಸುತ್ತಾ ಇಲ್ಲಿಯ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರಿಸುತ್ತಿರುವ ಬಿಜಿಪಾಟೀಲ ಕುಟುಂಬಸ್ಥರು ಪ್ರಶಂಶನಾರ್ಹರಾಗಿದ್ದಾರೆ. ಪ್ರತಿಸಲ ಯೋಗ ಶಿಬಿರ ನಡೆಸುತ್ತಾ ಭಾಲ್ಕಿಯ ನಾಗರಿಕರು ಆರೋಗ್ಯವಂತರಾಗಿ ಬಾಳಲು ಸಹಕರಿಸುತ್ತಲಿದ್ದಾರೆ ಎಂದು ಹೆಳಿದರು. ಕುಮಾರಿ ಗೌರಿ ಓಂ ಪಾಟೀಲ ಯೋಗ ಪ್ರದರ್ಶನ ಮಾಡಿದರು.
ಮಹಿಳಾ ಕದಳಿ ವೇದಿಕೆಯ ಮುಖ್ಯಸ್ಥೆ ಮಲ್ಲಮ್ಮಾ ನಾಗನಕೇರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರ್ಮಲಾ ಹಡಾ ಮತ್ತು ಯಾಶ್ವಿನ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಾರ್ವತಿ ಧುಮ್ಮನಸೂರೆ, ಡಾ| ಶಿಕ್ಷಾ ಸೂರ್ಯವಂಶಿ, ಓಂ ಬಿಜಿಪಾಟೀಲ ಉಪಸ್ಥಿತರಿದ್ದರು.
ಪ್ರಿಯಾ ಪಾಟೀಲ ಸ್ವಾಗತಿಸಿದರು. ಪಾರ್ವತಿ.ಡಿ ನಿರೂಪಿಸಿದರು. ಓಂಪಾಟೀಲ ವಂದಿಸಿದರು.