ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದೈಹಿಕ ಚಟುವಟಿಕೆ ಅವಶ್ಯಕ


ಮಾರೆಪ್ಪ ನಾಯಕ

ಸಿರುಗುಪ್ಪ, ಜು.23 : ಕಳೆದ ಮೂರು ವರ್ಷಗಳಲ್ಲಿ ಮಕ್ಕಳ ಕ್ರೀಡೆ, ದೈಹಿಕ ಚಟುವಟಿಕೆ ಕಡಿಮೆಯಾಗಿ ದೇಹದ ಚಟುವಟಿಕೆ ಸಾಕಷ್ಟು ಇಲ್ಲದಿರುವಿಕೆಯಿಂದ ದೇಹದಲ್ಲಿ ಅನಾರೋಗ್ಯಕರ ಕೊಬ್ಬು ಶೇಖರವಾಗಲು ಕಾರಣವಾಗಿದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೈಹಿಕ ಶಿಕ್ಷಣವು ಶಾಲಾ ಶಿಕ್ಷಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೈಹಿಕ ಶಿಕ್ಷಣ ನೀಡದ ಹೊರತು ಮಗುವಿನ ಸಾರ್ವತ್ರಿಕ ಬೆಳವಣಿಗೆ ಸಾಧ್ಯ ಇಲ್ಲ.
ಶಿಕ್ಷಣದಲ್ಲಿ ಕ್ರೀಡೆಯ ಬಹುಮುಖ್ಯ ಭಾಗ ಎಂದರೆ ಗುರಿ, ನಿಯಮ, ಸವಾಲು ಮತ್ತು ಹೊಂದಾಣಿಕೆ. ಆಟಗಳು ಮಾನಸಿಕ ಮತ್ತು ದೈಹಿಕ ಉತ್ತೇಜನವನ್ನು ನೀಡುತ್ತವೆ. ಕ್ರೀಡೆಯು ಸಾಮಾನ್ಯವಾಗಿ ಮನೋರಂಜನೆಗಾಗಿ ಬಳಸುವ ಮತ್ತು ಶೈಕ್ಷಣಿಕ ಉನ್ನತಿಯ ಸಾಧನವಾಗಿ ಬಳಸಲ್ಪಡುವ ಒಂದು ರಚನಾತ್ಮಕ ಚಟುವಟಿಕೆ. ಕ್ರೀಡೆಗಳು ಮಾನವನ ಬೌದ್ಧಿಕ, ಸಾಮಾಜಿಕ, ಭಾವನಾತ್ಮಕ ಮತ್ತು ದೈಹಿಕ ವಿವೇಚನೆಗಳನ್ನು ಹೆಚ್ಚಿಸಿ ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಯುತ್ತದೆ.
ದೈಹಿಕ ಚಟುವಟಿಕೆಗಳ ಮೂಲಕ ಮನೋಸಾಮರ್ಥ್ಯ ವನ್ನು ಹೆಚ್ಚಿಸಿಕೊಳ್ಳುವುದರಿಂದ ರಕ್ತದೊತ್ತಡ, ಮಧುಮೇಹ, ಸಂಧಿವಾತ ಕಾಯಿಲೆಗಳು ದೂರವಾಗುತ್ತವೆ. ದೈಹಿಕ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ. ಮಾನಸಿಕ, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಶಾರೀರಿಕ ಶಿಕ್ಷಣದ ಅಗತ್ಯ ಇದೆ. ಕೇವಲ ಸಾಧನೆ, ಉದ್ಯೋಗಕಷ್ಟೇ ಅಲ್ಲ ,ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದೈಹಿಕ ಶಿಕ್ಷಣ ಬೇಕೇ ಬೇಕು.
ಗ್ರಾಮೀಣ ಮಕ್ಕಳು ಹಾಗೂ ನಗರದ ಮಕ್ಕಳ ಚಟುವಟಿಕೆಗಳನ್ನು ಪರಸ್ಪರ ಹೋಲಿಸಲಾಗುವುದಿಲ್ಲ; ಯಾಕೆಂದರೆ ಗ್ರಾಮೀಣ ಮಕ್ಕಳು ಶಾಲೆಗಳಿಗೆ ಮೈಲುಗಟ್ಟಲೆ ನಡೆಯುವ ಪರಿಸ್ಥಿತಿ ಇರುವುದರಿಂದ ಹೆಚ್ಚಿನ ಚಟುವಟಿಕೆ ಹೊಂದಿರುತ್ತಾರೆ. ಆದರೆ ನಗರದ ಮಕ್ಕಳಿಗೆ ಈ ಬಗೆಯ ವ್ಯಾಯಾಮವಿಲ್ಲ. ಚಟುವಟಿಕೆ ಇಲ್ಲದೆ ಹೋದರೆ ಈ ಕ್ಯಾಲೊರಿಗಳು ಖರ್ಚಾಗದೆ ಹಾಗೇ ಉಳಿದು, ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತವೆ. ಕೊಬ್ಬು ದೇಹಕ್ಕೆ ಬಜ್ಜು ಬಹುದು ಅಥವಾ ರಕ್ತನಾಳಗಳಲ್ಲೂ ಶೇಖರಗೊಳ್ಳಬಹುದು. ರಕ್ತನಾಳಗಳಲ್ಲಿ ಸಂಗ್ರಹಿಸಲ್ಪಡುವ ಕೊಬ್ಬಿನಿಂದಾಗಿ ಹೃದಯರೋಗ, ಮಧುಮೇಹ ಮುಂತಾದವು ಹುಟ್ಟಿಕೊಳ್ಳುತ್ತವೆ.
ಮಕ್ಕಳ ದೇಹಾರೋಗ್ಯದೊಂದಿಗೆ ಭವಿಷ್ಯವನ್ನೂ ನಿರ್ಧರಿಸುವ ಸಮಯ. ಮಕ್ಕಳ ಹೆತ್ತವರ ಒತ್ತಡದ ಪರಿಣಾಮ, ಆಟವನ್ನು ಮರೆತು ಪಾಠದಲ್ಲಿ ತಲ್ಲೀನರಾಗುತ್ತಾರೆ. ಟಿವಿ ವೀಕ್ಷಣೆ ಒಂದು ನಿರುಪಯುಕ್ತ ಚಟವಾಗಿ ಬೆಳೆದಿದ್ದು, ಅದಕ್ಕೆ ಮಕ್ಕಳು ದಿನದಲ್ಲಿ ಮೂರ್ನಾಲ್ಕು ಗಂಟೆಗಳನ್ನು ಬಲಿಗೊಡುತ್ತಾರೆ. ಹೈಸ್ಕೂಲ್ ಮಟ್ಟದಲ್ಲಿ ಫಲಿತಾಂಶದ ಕಡೆಗೆ ಹೆಚ್ಚು ಒತ್ತು ನೀಡಿ ಶಾಲಾ ಕ್ರೀಡೆ ಮರೆತು ಲೈಬ್ರರಿ ಅವಧಿಗಳನ್ನೂ ಪಾಠಕ್ಕೆ ಮೀಸಲಿಡುತ್ತಿದ್ದಾರೆ. ಹೆಚ್ಚು ಹೆಚ್ಚು ಹೋಂವರ್ಕ್‍ಗಳನ್ನು ನೀಡುವುದರಿಂದ, ಅದನ್ನು ಮಾಡುವುದಕ್ಕಾಗಿ ಸಂಜೆಯ ಕ್ರೀಡೆಯ ಅವಧಿಯನ್ನೂ ಮಕ್ಕಳು ಮರೆಯುತ್ತಾರೆ, ಶಾಲೆಗಳು ಇಕ್ಕಟ್ಟಾದ ಗಲ್ಲಿಗಳ ನಡುವೆ ಇದ್ದು, ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ನಿಗದಿತ ವಿಸ್ತಾರದ ಅಂಗಳವನ್ನು ಹೊಂದಿಲ್ಲ.
ಸ್ಮಾರ್ಟ್ ಫೋನ್ ಬಳಕೆಯು ಪೋಷಕರಲ್ಲಿ ಚಟವಾಗಿ ಬೆಳೆಯುತ್ತಿದ್ದು, ಅದು ಮಕ್ಕಳಲ್ಲೂ ಪ್ರತಿಫಲಿಸುತ್ತಿದೆ. ಸ್ಮಾರ್ಟ್ ಫೋನ್ ನೀಡುವ ಮನರಂಜನೆಯ ಮುಂದೆ ಕ್ರೀಡೆಗಳು ಅನಾಕರ್ಷಕವಾಗಿ ಕಾಣಿಸುತ್ತಿವೆ. ಮೈದಾನದ ಆಟಗಳಿಗಿಂತ ಹೆಚ್ಚು ಮಕ್ಕಳು ಮೊಬೈಲ್ ಪರದೆಯ ವಿಡಿಯೋ ಗೇಮ್‍ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಆಟಕ್ಕೆ ಅಗತ್ಯವಾದ ಸಂಗಾತಿಗಳು ಮಕ್ಕಳಿಗೆ ಸರಿಯಾಗಿಸಿಗುತ್ತಿಲ್ಲ.
ಮಕ್ಕಳ ಆರೋಗ್ಯಕರವಾಗಿರಲು ಕ್ರೀಡೆ, ವ್ಯಾಯಾಮಗಳನ್ನು ಸರಕಾರ, ಶಾಲೆ ಹಾಗೂ ಕುಟುಂಬ ನೆಲೆಯಲ್ಲಿ ಪ್ರಯತ್ನಿಸಬೇಕಾಗಿದೆ. ಕ್ರೀಡೆಯಿಂದ ದೈಹಿಕ ಆರೋಗ್ಯವಷ್ಟೇ ಹೆಚ್ಚುವುದಲ್ಲ ಸಾರ್ವಜನಿಕ ಸಂಪರ್ಕ, ಸಂವಹನದ ಕಲೆ, ಕ್ರೀಡಾ ಮನೋಭಾವಗಳೂ ಬೆಳೆಯುತ್ತವೆ, ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು, ಪಾಠದ ಜೊತೆಗೆ ಆಟಕ್ಕೂ ಸೂಕ್ತ ಎಂಬುದನ್ನು ಪೋಷಕರು ಅರಿತು ಮಕ್ಕಳನ್ನು ಕ್ರೀಡೆಯಲ್ಲಿ ಭಾಗಿಯಾಗಲು ಪ್ರೋತ್ಸಾಹಿಸಬೇಕು. ದೇಹಕ್ಕೆ ಚಟುವಟಿಕೆ ನೀಡುವ ಕಬಡ್ಡಿ, ಫುಟ್ಬಾಲ್, ಬ್ಯಾಡ್ಮಿಂಟನ್, ಜಿಮ್‍ಗಳಿಗೆ ಭೇಟಿ ನೀಡಿ ಶಾಲಾ ಕ್ರೀಡಾ ಅವಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
ಪಿ.ಡಿ.ಭಜಂತ್ರಿ, ಬಿ.ಇ.ಒ ಸಾರ್ವಜನಿಕ ಶಿಕ್ಷಣ ಇಲಾಖೆ, ಸಿರುಗುಪ್ಪ
ದಿನಕ್ಕೆ ಕನಿಷ್ಠ ಒಂದು ಗಂಟೆಯ ದೈಹಿಕ ಚಟುವಟಿಕೆಯಲ್ಲಿ ಮಗ್ನರಾಗುವುದು ಅಗತ್ಯ. ಆಟಗಳು ಸಾಧ್ಯವಾಗದಿದ್ದರೆ ಮುಂಜಾನೆಯ ಹಾಗೂ ಸಂಜೆಯ ವಾಕಿಂಗ್, ವ್ಯಾಯಾಮ, ಈಜು ಕಲಿಯುವಿಕೆ, ಸೈಕ್ಲಿಂಗ್ ಮಾಡುವುದರಿಂದ ದೇಹವನ್ನು ಸಕ್ರಿಯವಾಗಿ, ಚುರುಕಾಗಿಡುತ್ತವೆ.
ರಮೇಶ, ಸಹಕಾರ್ಯದರ್ಶಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘ, ಬೆಂಗಳೂರು