
ಧಾರವಾಡ, ಮಾ.6: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಮಹಿಳೆಯರ ಅರೋಗ್ಯವೂ ಮುಖ್ಯವಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾದ ಮಹಿಳೆಯರಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಪಾಟೀಲ ಶಶಿ ಅವರು ತಿಳಿಸಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆರೋಗ್ಯವಂತ ಮಹಿಳೆಯರಿಂದ ಆರೋಗ್ಯಕರ ಭಾರತ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ. ಘಟಕದಿಂದ ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿತ ಹಾಗೂ ಪಾಶ್ರ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಆರೋಗ್ಯ ಇಲಾಖೆ ಆವರಣದಿಂದ ಜನಜಾಗೃತಿಗಾಗಿ ಆಯೋಜಿಸಿದ್ದ ಸೈಕ್ಲೋಥಾನ್ ಜಾಥಾಗೆ ಚಾಲನೆ ನೀಡಿ, ಮಾತನಾಡಿದರು.
ಮಹಿಳೆಯರು ತಮ್ಮ ದಿನನಿತ್ಯದ ಕಾರ್ಯ, ಒತ್ತಡಗಳ ನಡುವೆಯೂ ಯೋಗ, ನಡಿಗೆ, ವ್ಯಾಯಾಮಗಳಿಗೆ ಸ್ವಲ್ಪ ಸಮಯ ಮೀಸಲಿಡಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ವಿಶ್ರಾಂತಿ ಪಡೆಯಬೇಕು. ಮಹಿಳೆಯರು ನೆಮ್ಮದಿ, ಆರೋಗ್ಯವಂತರಾಗಿ ಇದ್ದಾಗ ಮಾತ್ರ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನಿಗಾವಹಿಸಿ, ಅಗತ್ಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ.ಸುಜಾತಾ ಹಸವಿಮಠ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಅಹಿತಕರ ಆಹಾರ ಪದ್ದತಿ, ದೈಹಿಕ ಶ್ರಮ ಇಲ್ಲದಿರುವುದು ಮತ್ತು ವ್ಯಸನಗಳಾದ ಮದ್ಯಪಾನ ಹಾಗೂ ತಂಬಾಕು ಸೇವನೆ, ಅತಿಯಾದ ಮಾನಸಿಕ ಒತ್ತಡಗಳು ಅಸಾಂಕ್ರಾಮಿಕ ರೋಗಗಳ ಪ್ರಮುಖ ಆಪಾಯಕಾರಿ ಅಂಶಗಳಾಗಿವೆ. ಇವು ದಿನನಿತ್ಯದ ಕಾರ್ಯಗಳು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದರು.
ಸೈಕಲ್ ಜಾಥಾದಲ್ಲಿ ಪ್ರಜಂಟೆಶನ್ ಬಾಲಕೀಯರ ಪ್ರೌಢಶಾಲಾ ವಿದ್ಯಾರ್ಥಿನಿಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿ, ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.