ಆರೋಗ್ಯವಂತ ಮಕ್ಕಳಿಂದ ದೇಶ ಬಲಿಷ್ಠ


ಚಿತ್ರದುರ್ಗ.ಸೆ.18; ಆರೋಗ್ಯವಂತ ಮಕ್ಕಳಿಂದ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಚಿತ್ರದುರ್ಗ-ಭರಮಸಾಗರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಮಾಸಾಚರಣೆ ಹಾಗೂ ಪ್ರಧಾನ ಮಂತ್ರಿ ಮಾತೃವಂದನಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಆರೋಗ್ಯವಾಗಿದ್ದರೆ ಮಾತ್ರ ಆರೋಗ್ಯ ಮತ್ತು ಸದೃಢ ದೇಶ ನಿರ್ಮಿಸಲು ಸಾಧ್ಯ. ಪೌಷ್ಠಿಕಾಂಶವಿರುವ ಆಹಾರ ಸೇವಿಸುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಗು ಹೊಟ್ಟೆಯಲ್ಲಿದ್ದಾಗಲೇ ಗರ್ಭಿಣಿ ಯಾವ ರೀತಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಹಾಗೂ ಮಗು ಜನನದ ಬಳಿಕ ಬಾಣಂತಿ ಹಾಗೂ ಮಗು ಯಾವ ರೀತಿಯ ಪೌಷ್ಠಿಕ ಆಹಾರ ಸೇವಿಸುವುದರ ಮೂಲಕ ಉತ್ತಮ ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿ ದೇವಿ ಮಾತನಾಡಿ, ಗರ್ಭಿಣಿಯರಿಗೆ ಪೌಷ್ಠಿಕಯುಕ್ತ ಆಹಾರ ತುಂಬ ಅವಶ್ಯಕವಾಗಿರುತ್ತದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾಕಾರ್ಯಕರ್ತರು ಗರ್ಭಿಣಿಯರಿಗೆ ಪೌಷ್ಠಿಕಯುಕ್ತ ಆಹಾರವನ್ನು ತಲುಪಿಸುತ್ತಿದ್ದಾರೆ. ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳನ್ನು ಹೊರ ತರಬೇಕು ಎಂದು ತಿಳಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಗಿರೀಶ್, ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್, ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಾಣಾಧಿಕಾರಿ ಕೆಂಪಹನುಮಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸುಧಾ, ಪಿ.ಲೋಕೇಶ್ವರಪ್ಪ ಸೇರಿದಂತೆ ಮತ್ತಿತರರು ಇದ್ದರು.