ಆರೋಗ್ಯದ ಬಗ್ಗೆ ಕೂಲಿಕಾರರಿಗೆ ಇರಲಿ ಹೆಚ್ಚಿನ ಕಾಳಜಿ

ರಾಯಚೂರು,ಮೇ.೨೩- ನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡುವುದಲ್ಲದೇ, ಅವರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಸಿರವಾರ ತಾ.ಪಂ.ಐಇಸಿ ಸಂಯೋಜಕ ರಾಜೇಂದ್ರ ಕುಮಾರ ಹೇಳಿದರು.
ಜಿಲ್ಲೆಯ ಸಿರವಾರ ತಾಲೂಕಿನ ಚಾಗಬಾವಿ ಗ್ರಾಮ ಪಂಚಾಯತಿಯ ಕಡದಿನ್ನಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಡಿಯಲ್ಲಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ವತಿಯಿಂದ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆಗೆ ಚಾಲನೆ ನೀಡಲಾಯಿತು.
ಜೊತೆಗೆ ನರೇಗಾ ಯೋಜನೆಯಡಿ ಈ ವರ್ಷ ಕೂಲಿ ಹಣವನ್ನು ಹೆಚ್ಚಿಸಲಾಗಿದೆ. ತಾಂತ್ರಿಕ ಸಹಾಯಕರು ನಿಮಗೆ ನೀಡಿದ ಆಳತೆಗನುಸಾರವಾಗಿ ನೀವು ಕೆಲಸ ಮಾಡಿದಾಗ ನಿಮಗೆ ಪೂರ್ತಿ ಕೂಲಿ ಹಣ ದೊರೆಯಲಿದೆ. ಕಡ್ಡಾಯವಾಗಿ ಎಲ್ಲರೂ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ತಿಳಿಸಿದರು.
ನಂತರ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೂಲಿಕಾರರ ಆರೋಗ್ಯ ತಪಾಸಣೆಯನ್ನು ಮಾಡಿದರು. ಈ ವೇಳೆ ಬಿಪಿ, ಶುಗರ್ ಸೇರಿದಂತೆ ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಹಲವು ಕಾಯಿಲೆಗಳ ತಪಾಸಣೆ ನಡೆಸಿ, ಮಾತ್ರೆಗಳನ್ನು ವಿತರಿಸಿದರು.
ಗ್ರಾ.ಪಂ.ಸದಸ್ಯ ವೀರೇಶ, ಸಮುದಾಯ ಆರೋಗ್ಯ ಅಧಿಕಾರಿ ನಾಗೇಂದ್ರ ಹಾಗೂ ತಾಲೂಕು ಸಂಯೋಜಕ ಬಾವಾಸಾಬ್, ಜಿಕೆಎಂ ಶಿವಲೀಲಾ, ಮೇಟ್ ಹಾಗೂ ಕೂಲಿಕಾರರು ಇದ್ದರು.