ಆರೋಗ್ಯಕ್ಕೆ ಒತ್ತು ನೀಡಲು ದಿನೇಶ್ ಕರೆ

ಬೆಂಗಳೂರು, ಜೂ. ೨೫-ಅತಿ ಕಡಿಮೆ ವಯಸ್ಸಿನ ಯುವಕ, ಯುವತಿಯರಲ್ಲಿ ಇಂದು ಕ್ಯಾನ್ಸರ್, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತ ರೋಗಗಳಿಗೆ ತುತ್ತಾಗುತ್ತಿದ್ದು ಯುವಕರು ಆರೋಗ್ಯದ ಕಡೆಹೆಚ್ಚಿನ ಗಮನಹರಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದ ಶ್ರೀ ಕೃಷ್ಣದೇವರಾಯ ಎಜುಕೇಷನಲ್ ಟ್ರಸ್ಟ್, ಸರ್. ಎಂ. ವಿಶ್ವೇಶ್ವರಯ್ಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಸಂಭ್ರಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾದಕ ವ್ಯಸನ ಮತ್ತು ಮದ್ಯಪಾನ, ಸಿಗರೇಟ್ ಸೇವನೆ ಮಾಡಬೇಡಿ, ಉತ್ತಮ ಆಹಾರ ಪದ್ಧತಿ ಮತ್ತು ವ್ಯಾಯಾಮದಿಂದ ಎಲ್ಲಾ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದರು.
ನಾನು ಇಂಜಿನಿಯರಿಂಗ್ ಪದವಿ ಪಡೆದಿದ್ದು, ಮಾಸ್ಟರ್ ಪದವಿ ಪಡೆಯುವ ಹಂಬಲವಿತ್ತು. ಆದರೆ ಅನಿರೀಕ್ಷಿತ ಕಾರಣದಿಂದ ರಾಜಕಾರಣಕ್ಕೆ ಬರಬೇಕಾಯಿತು. ರಾಜಕಾರಣಕ್ಕೆ ಬಂದು ೬ ಬಾರಿ ಶಾಸಕನಾಗಿ ಈಗ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ. ಎ.ಸಿ. ಚಂದ್ರಶೇಖರ್‌ರಾಜು, ಉಪಾಧ್ಯಕ್ಷ ಕೆ.ವಿ. ಶೇಖರ್‌ರಾಜು, ಕಾರ್ಯದರ್ಶಿ ಶ್ಯಾಮ್‌ರಾಜು, ಖಜಾಂಚಿ ವೆಂಕಟರಮಣರಾಜು, ಪ್ರಾಂಶುಪಾಲ ಪ್ರೊ. ಎಸ್.ಜಿ. ರಾಕೇಶ್, ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.