ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ

ಕಲಬುರಗಿ:ಮಾ.26:ಮನುಷ್ಯ ಎಷ್ಟೆಲ್ಲಾ ಭೌತಿಕ ಸಂಪತ್ತು ಗಳಿಸಿದರು ಕೂಡಾ, ಅವುಗಳನ್ನು ಅನುಭವಿಸಲು ಅರೋಗ್ಯ ಇಲ್ಲದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ. ಆರೋಗ್ಯವೇ ದೊಡ್ಡ ಸಂಪತ್ತಾಗಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕಾದದ್ದು ತುಂಬಾ ಅಗತ್ಯವಾಗಿದೆಯೆಂದು ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಅಂಬಾರಾಯ ತಂಗಾ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ತಾಲ್ಲೂಕಾ ಆರೋಗ್ಯ ಇಲಾಖೆಯ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಆರೋಗ್ಯ ಶಿಕ್ಷಣ, ಕೋವಿಡ್-19 ವಿಶೇಷ ಉಪನ್ಯಾಸ, ಕ್ವಿಜ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಆರೋಗ್ಯ ಇಲಾಖೆಯ ವಿ.ಬಿ.ಡಿ ಮೇಲ್ವಿಚಾರಕ ಶರಣಯ್ಯ ಹಿರೇಮಠ ಮಾತನಾಡಿ, ಕ್ಷಯರೋಗ, ಟೈಪೈಡ್, ಮಲೇರಿಯಾ, ಕಾಲರಾ, ಆಮಶಂಕೆ, ಕರೋನಾ ಸೇರಿದಂತೆ ಮುಂತಾದ ರೋಗಗಳು ಉಂಟಾಗಲು ಕಾರಣಗಳು, ಪರಿಹಾರೋಪಾಯಗಳು, ಮುಂಜಾಗ್ರತಾ ಕ್ರಮಗಳು, ಸ್ವಚ್ಛತೆ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮವನ್ನು ಪ್ರಾಂಶುಪಾಲ ಮಹ್ಮದ್ ಅಲ್ಲಾವುದ್ದಿನ್ ಸಾಗರ ಉದ್ಘಾಟಿಸಿದರು. ಹಿರಿಯ ಆರೋಗ್ಯ ಸಹಾಯಕ ಶ್ರೀಶೈಲ ಅರಳಗುಂಡಗಿ, ಲೆಕ್ಕಪತ್ರ ಸಹಾಯ ಪ್ರಹ್ಲಾದ ಪುಲೆ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪುರಕರ್, ಶರಣಮ್ಮ ಭಾವಿಕಟ್ಟಿ. ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ., ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಸಿದ್ದಪ್ಪ ಪೂಜಾರಿ ಸೇರಿದಂತೆ ಇನ್ನಿತರರಿದ್ದರು.
ಕ್ವಿಜ್‍ನಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಾದ ಮಾಳಣ್ಣ, ಸಚಿನ್, ಮುಸ್ಕಾನ್ ಅವರಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.