
ಕಲಬುರಗಿ,ಜು.19-“ಮನುಷ್ಯನ ಆರೋಗ್ಯಕರ ಬದುಕಿಗೆ ಹಾಸ್ಯ ಅವಶ್ಯ. ಇಂದು ಹಲವಾರು ಒತ್ತಡಗಳ ನಡುವೆ ಮನುಷ್ಯ ಯಾಂತ್ರಿಕವಾಗಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಹಾಗಾಗಿ ಹಾಸ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿ ಎಂಥ ಒತ್ತಡದ ನಡುವೆಯೂ ನಿರಾಳವಾಗಿ ಜೀವಿಸಬಲ್ಲ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.
ಕೋಟನೂರ ಗ್ರಾಮದಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ‘ಎ’, ‘ಬಿ’ ಮತ್ತು ಸ್ವ ನಿಧಿ ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ 2022-23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ತನ್ನ ಶಾಲಾ, ಕಾಲೇಜು ಜೀವನದಲ್ಲಿ ಇಂತಹ ಶಿಬಿರದಲ್ಲಿ ಭಾಗವಹಿಸುವದರ ಮೂಲಕ ತಮ್ಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬಹುದು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ ಮಾತನಾಡುತ್ತ ಇಂತಹ ಕಾರ್ಯಕ್ರಮ ಆಯೋಜಿಸುವುದರಿಂದ ಮಕ್ಕಳು ಎಲ್ಲರೊಟ್ಟಿಗೆ ಬೆರೆತು ಬಾಳುವುದನ್ನ ಕಲಿತುಕೊಳ್ಳುತ್ತಾರೆ ಎಂದರು.
ಸ್ಥಳೀಯ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರು ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ತಮ್ಮ ಹಾಸ್ಯದ ಮಾತುಗಳಿಂದ ಮನಸೊರೆಗೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಆರ್.ಬಿ.ಕೊಂಡಾ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ರಾ.ಸೇ.ಯೋ ಅಧಿಕಾರಿಗಳಾದ ಡಾ.ಮಹೇಶ ಗಂವ್ಹಾರ, ಡಾ.ರೇಣುಕಾ ಹಾಗರಗುಂಡಗಿ,ಡಾ.ಸುಷ್ಮಾ ಕುಲಕರ್ಣಿ, ಡಾ.ಮೋಹನರಾಜ ಪತ್ತಾರ, ಡಾ.ಪ್ರೇಮಚಂದ ಚವ್ಹಾಣ, ಉಪನ್ಯಾಸಕರಾದ ಸಂಗಮೇಶ, ಸಿದ್ದಲಿಂಗ ಬಿ. ಶ್ರೀಮತಿ ಠಾಕುರ್, ಕುಮಾರಿ.ಅಂಬಿಕಾ, ಕು.ಪಲ್ಲವಿ ಮೊದಲಾದವರು ಭಾಗವಹಿಸಿದ್ದರು. ವಿಜಯಲಕ್ಷ್ಮಿ ಗುರುಸಿದ್ದಯ್ಯ ತಂಡದವರು ಕಾರ್ಯಕ್ರಮ ನಿರ್ವಹಿಸಿದರು. ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.