ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹ ದೂರ

ಕಲಬುರಗಿ:ನ.14: ಇಂದಿನ ಆಧುನಿಕ ಒತ್ತಡದ ಬದುಕಿನಿಂದ ವಿವಿಧ ರೋಗಗಳು ಉದ್ಭವವಾಗುತ್ತಿವೆ. ಒಂದು ಕಾಲದಲ್ಲಿ ಶ್ರೀಮಂತರ ರೋಗವೆಂದು ಕರೆಸಿಕೊಳ್ಳುತ್ತಿದ್ದ ಸಕ್ಕರೆ ಕಾಯಿಲೆ ಇಂದು ವಿವಿಧ ಕಾರಣಗಳಿಂದ ಜನಸಾಮನ್ಯರ ಕಾಯಿಲೆಯಾಗಿದೆ. ಸೂಕ್ತ ಸಮಯಕ್ಕೆ ಆಹಾರ ಸೇವನೆ, ನಿದ್ರೆ, ಸಮತೋಲನ ಆಹಾರ, ಒತ್ತಡಮುಕ್ತ ಜೀವನ,ಯೋಗ,ಧ್ಯಾನದಂತಹ ಕ್ರಮಗಳಂತಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಮಧುಮೇಹದಿಂದ ದೂರವಿರಲು ಸಾಧ್ಯವಿದೆಯೆಂದು ಕುಟುಂಬ ವೈದ್ಯ ಡಾ.ಸಂಜೀವಕುಮಾರ ಪಾಟೀಲ ಸಲಹೆ ನಈಡಿದರು.
ಅವರು ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಶರಣ ಕ್ಲಿನಿಕ್’ನಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ‘ವಿಶ್ವ ಮಧುಮೇಹ ನಿವಾರಣೆ ದಿನಾಚರಣೆ’ಯ ನಿಮಿತ್ಯ ಶನಿವಾರ ಏರ್ಪಡಿಸಿದ್ದ ‘ಉಚಿತ ಮಧುಮೇಹ ತಪಾಸಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಜೀವನಶೈಲಿಯಿಂದ ಹೊರಬರದಿದ್ದರೇ, ಮುಂಬರುವ ಕೆಲವೇ ವರ್ಷಗಳಲ್ಲಿ ಭಾರತ ‘ಮಧುಮೇಹಿಗಳ ದೇಶ’ವಾದರೂ ಆಶ್ಚರ್ಯವಿಲ್ಲ. ನಿಯಮಿತ ವ್ಯಾಯಾಮ, ಎಣ್ಣೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳ ಸೇವನೆ, ಸಿಹಿ ತಿಂಡಿ-ತಿನಿಸುಗಳ ಸೇವನೆ ವರ್ಜಿಸುವುದು, ಹೊಟ್ಟಭಾರವೆನಿಸುವ ಹಾಗೆ ಆಹಾರ ಸೇವನೆ ಮಾಡದಿರುವ ದಿನನಿತ್ಯದ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಬಿ.ಪಾಟೀಲ, ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಗೆ ಲಕ್ಷ್ಯ ವಹಿಸದಿರುವದರಿಂದ ಕಾಯಿಲೆಗಳಿಗೆ ನಾವೇ ಆಹ್ವಾನ ನೀಡುವಂತಾಗಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದಲ್ಲಿ ಏನಾದರೂ ಏರು-ಪೇರಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಎಸ್.ಎಸ್.ಪಾಟೀಲ ಬಡದಾಳ, ಅಮರ ಜಿ.ಬಂಗರಗಿ, ಮಲ್ಲಿಕಾರ್ಜುನ ತಡಕಲ್, ಬಸವಪ್ರಭು ಹಿರೇಮಠ, ಶ್ರೀನಿವಾಸ ಸುತಾರ ಸೇರಿದಂತೆ ಹಲವರಿದ್ದರು.