ಆರೋಗ್ಯಕರ ಆಲೋಚನೆ ಮುಖ್ಯ

ತುಮಕೂರು, ನ. ೧- ದೇಶ ನಿರ್ಮಾಣಕ್ಕೆ ಆರೋಗ್ಯಕರ ಆಲೋಚನೆ ಅತಿ ಮುಖ್ಯ ಎಂದು ಯೋಗ ಶಿಕ್ಷಕ ಹಾಗೂ ಹಿರಿಯ ವಕೀಲ ಎಸ್.ವಿ. ರವೀಂದ್ರನಾಥ್ ಠಾಗೂರ್ ಹೇಳಿದರು.
ತುಮಕೂರಿನ ಹನುಮಂತಪುರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮರ್ಥವಾದ ಭಾರತವನ್ನು ನಿರ್ಮಾಣ ಮಾಡುವುದೇ ಫಿಟ್ ಇಂಡಿಯಾದ ಉದ್ದೇಶವಾಗಿದೆ. ಯುವ ಮನಸ್ಸುಗಳನ್ನು ಒಟ್ಟುಗೂಡಿಸುವುದರೊಂದಿಗೆ ಉತ್ತಮವಾದ ಸಮಾಜವನ್ನು ಕಟ್ಟಬೇಕಾದರೆ ಉತ್ತಮ ಮನಸ್ಸುಗಳನ್ನು ಕಟ್ಟಬೇಕಾಗಿದ್ದು, ಜಗತ್ತಿನ ಒಳಿತಿಗಾಗಿ ಆರೋಗ್ಯಕರ ಆಲೋಚನೆಗಳನ್ನು ಮಾಡಬೇಕಾಗಿದೆ ಎಂದರು.
ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ, ಪ್ರಾಣಿ-ಪಕ್ಷಿಗಳಿಗೂ ಫಿಟ್ ಎನ್ನುವುದು ಅನ್ವಯಿಸುತ್ತದೆ. ಇಡೀ ಜಗತ್ತಿನಲ್ಲಿರುವವರೆಲ್ಲರೂ ಆರೋಗ್ಯಪೂರ್ಣವಾಗಿ ಇರಬೇಕು ಎನ್ನುವುದು ಫಿಟ್ ಇಂಡಿಯಾದ ಉದ್ದೇಶವಾಗಿದೆ. ವ್ಯಕ್ತಿಗತವಾದ ಆಲೋಚನೆಗಳು ಸರಿಯಾಗಿದ್ದರೆ ಸಮಾಜದ ಆಲೋಚನೆಗಳು ಸರಿಯಾಗಿರುತ್ತವೆ. ಸಾಮರ್ಥ್ಯವಿರುವ ದೇಶವನ್ನು ಕಟ್ಟಬೇಕಾದ ಅವಶ್ಯಕತೆ ಇದ್ದು, ವ್ಯಕ್ತಿಗತವಾದ ಅಲೋಚನೆಗಳು ಅತ್ಯಂತ ಮುಖ್ಯವಾಗಿದೆ. ಸ್ವಾಮಿವಿವೇಕಾನಂದರು ಹೇಳುವ ರೀತಿಯಲ್ಲಿ ಜಗತ್ತಿನ ಒಳಿತಿಗಾಗಿ ನಾವು ಆರೋಗ್ಯಕವಾದ ಅಲೋಚನೆಗಳನ್ನು ಮಾಡಬೇಕಾಗಿದೆ ಎಂದರು.
ಫಿಟ್ ಇಂಡಿಯಾ ಸುಭಾಷಿತಕಾರ ಹೇಳುವ ರೀತಿಯಲ್ಲಿ ಕೃಷಿ ಮಾಡುವವನಿಗೆ ದುರ್ಭಿಕ್ಷೆ ಬೇಡುವ ಕಾಲ ಎಂದಿಗೂ ಬರುವುದಿಲ್ಲ. ಯೋಗ ಮಾಡುವವನಿಗೆ ವೈಕ್ಯಲ್ಲ ಬರುವುದಿಲ್ಲ, ಮಾನಸಿಕ, ಶಾರೀರಿಕ, ವೈಕಲ್ಯ ಬರುವುದಿಲ್ಲ. ಶರೀರ ಸರಿ ಇಲ್ಲದೇ ಇದ್ದರೆ ಅಂಗಾಂಗ ವೈಫಲ್ಯಗಳು ಬರುತ್ತವೆ. ಇಡೀ ಪ್ರಪಂಚ ಇಂದು ಭಾರತದ ಹಿಂದೆ ಇದೆ. ಆರೋಗ್ಯವೆನ್ನುವುದು ಕೇವಲ ಶಾರೀರಿಕ ಆರೋಗ್ಯ ಮಾತ್ರವಲ್ಲ, ಇಡೀ ಪ್ರಪಂಚದ ಆರೋಗ್ಯವೂ ಕೂಡ ಮುಖ್ಯವಾಗಿದೆ ಎನ್ನುವುದೇ ಫಿಟ್ ಇಂಡಿಯಾದ ಧ್ಯೇಯವಾಗಿದೆ ಎಂದು ಹೇಳಿದರು.
ದೇಶವನ್ನು ಹೊಸದಾಗಿ ಕಟ್ಟುವ ಅಗತ್ಯವಿಲ್ಲ. ಈಗಾಗಲೇ ಸಮರ್ಥವಾಗಿರುವ ಭಾರತವನ್ನು ಉಳಿಸಿಕೊಂಡರೆ ಸಾಕಾಗಿದ್ದು, ಶಿಥಿಲವಾಗಿರುವುದನ್ನು ಸರಿಮಾಡಿಕೊಳ್ಳಬೇಕಾಗಿದೆ. ಸಾರ್ಮಥ್ಯವೆನ್ನುವುದು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಬಾರದು ಅದು ಇಡೀ ಭಾರತಕ್ಕೆ ಅನ್ವಯವಾಗಬೇಕು. ನಮ್ಮ ಅಲೋಚನೆಯೂ ಕೂಡ ಬಹಳ ಮುಖ್ಯವಾಗುತ್ತದೆ. ಆರೋಗ್ಯದಂತೆ ಅಲೋಚನೆ, ನಮ್ಮಲ್ಲಿ ಮೂರು ರೀತಿಯ ಆಹಾರ ವ್ಯವಸ್ಥೆ ಇದೆ. ಅವು ಸಾತ್ವಿಕ, ತಾಮಸಿಕ, ರಾಜಸಿಕ, ಆಹಾರಗಳಾಗಿವೆ. ಶ್ರಮಿಕ ತನ್ನ ದೇಹಕ್ಕೆ ಅನುಗುಣವಾದ ಆಹಾರವನ್ನು ಸೇವಿಸಬೇಕಾಗುತ್ತದೆ. ನಮ್ಮ ನಮ್ಮ ದೇಹ ಹಾಗೂ ಕೆಲಸಕ್ಕೆ ಅನುಗುಣವಾಗಿ ನಾವು ಆಹಾರವನ್ನು ಸೇವಿಸಬೇಕಾಗುತ್ತದೆ. ಇಲ್ಲದೆ ಹೋದರೆ ಫಿಟ್ ಇಂಡಿಯಾ ನಿರ್ಮಾಣ ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಗಮನಿಸಬೇಕು. ಫಿಟ್ ಇಂಡಿಯಾ ಇಂದು ನಮ್ಮ ಯುವ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿದೆ. ಯುವಜನತೆಗೆ ಮನೆಯೇ ನಿಜವಾದ ವಿಶ್ವವಿದ್ಯಾನಿಲಯವಾಗಿದೆ ತಂದೆ, ತಾಯಿ, ಅಜ್ಜ, ಅಜ್ಜಿ ಹಿರಿಯರೇ ಯವಜನತೆಯ ವಿಶ್ವವಿದ್ಯಾನಿಲಯವಾಗಿದೆ ಎಂದು ಠಾಗೂರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.