ಕೋಲಾರ,ಮಾ,೨೫-ರಾಷ್ಟ್ರೀಯ ಹೆದ್ದಾರಿ ೭೫ ಯನ್ನು ಆರು ಪಥದ ವಿಸ್ತರಣೆಗೆ ಸಮಗ್ರ ಯೋಜನಾ ವರದಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು ಅಂತಿಮ ಹಂತದಲ್ಲಿದೆ. ಸರ್ವಿಸ್ ರಸ್ತೆ, ಹೆಚ್ಚುವರಿಯಾಗಿ ಮೇಲ್ಸೇತುವೆ ನಿರ್ಮಿಸುತ್ತಿದ್ದು, ಸುಮಾರು ೨ ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬೆಳ್ಳೂರು, ನರಸಾಪುರ ಬಳಿ ಫ್ಲೈಓವರ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ನಾಲ್ಕು ಪಥದ ರಸ್ತೆ ನಿರ್ಮಾಣವಾಯಿತು. ಈಗ ಸಂಚಾರ ದಟ್ಟಣೆ ಇದ್ದು ತಮಿಳುನಾಡು, ಆಂಧ್ರಕ್ಕೆ ತೆರಳುವ ರಸ್ತೆ ಇದು. ತಿರುಪತಿಯನ್ನು ಸಂಪರ್ಕಿಸುತ್ತದೆ, ಬೆಂಗಳೂರು ಹತ್ತಿರದಲ್ಲಿದೆ. ಜೊತೆಗೆ ಏಷ್ಯಾದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಮಾರುಕಟ್ಟೆ, ಎರಡನೇ ಅತಿ ಹೆಚ್ಚು ಟೊಮೆಟೊ ಮಾರುಕಟ್ಟೆ ಇದೆ. ಹೀಗಾಗಿ, ರಸ್ತೆಯನ್ನು ಆರು ಪಥಗಳ ವಿಸ್ತರಣೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬೇಡಿಕೆ ಇಟ್ಟಿದ್ದೆವು ಎಂದರು.
ಬೆಂಗಳೂರಿನ ಕೆ.ಆರ್.ಪುರ ಕೆರೆಯಿಂದ ಹಿಡಿದು ಗಡಿಭಾಗದ ನಂಗಲಿವರೆಗೆ ಹಲವಾರು ಕೆಲಸಗಳಿವೆ. ಈ ಹಾದಿಯಲ್ಲಿ ೮೫ ಅಂಡರ್‌ಪಾಸ್ ನಿರ್ಮಿಸಲಾಗುತ್ತಿದೆ. ರೈತರು ಜಮೀನು ಹಳ್ಳಿಗೆ ಹೋಗಲು, ತಾವು ಬೆಳೆದ ಉತ್ಪನ್ನಗಳನ್ನು ವಾಹನದಲ್ಲಿ ಸಾಗಿಸಲು ಅನುಕೂಲ ಮಾಡಿಕೊಡಲಾಗುವುದು. ಸದ್ಯದಲ್ಲೇ ಸಮಗ್ರ ಯೋಜನಾ ವರದಿಯನ್ನು ಸಚಿವರಿಗೆ ನೀಡಲಾಗುವುದು’ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಕೋಲಾರ ಗಡಿಯಿಂದ ಆಂಧ್ರ ಗಡಿವರೆಗೆ ಎಲ್ಲೆಲ್ಲಿ ಬ್ಲ್ಯಾಕ್‌ಸ್ಪಾಟ್ ಇದೆ, ಎಲ್ಲೆಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿದೆ ಎಂಬುದನ್ನು ಗುರುತಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮೀಕ್ಷೆ ನಡೆಸಲಾಗಿತ್ತು. ಅದಕ್ಕೆ ೩೮೬ ಕೋಟಿ ಬಿಡುಗಡೆ ಮಾಡಲಾಗಿದೆ. ವಡಗೂರು, ತಂಬಳ್ಳಿ ಬಳಿಯೂ ಕೆಲಸ ನಡೆಯುತ್ತಿದೆ. ಮಣ್ಣು ಸಿಗದ ಕಾರಣ ಕಾಮಗಾರಿ ವಿಳಂಬವಾಯಿತು ಯಾವುದೇ ಅಡೆತಡೆ ಉಂಟಾಗಬಾರದು. ಬೇಗನೇ ಕೆಲಸ ಶುರುವಾಗಿ ಮುಗಿಯಬೇಕು. ಅಭಿವೃದ್ಧಿ ವಿಚಾರಯಲ್ಲಿ ಯಾವುದೇ ರಾಜಕಾರಣ ನಡೆಯಬಾರದು. ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್ ಡೈರೆಕ್ಟರ್ ಜೈ ಕುಮಾರ್, ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಸಂದೀಪ್, ಸತೀಶ್, ಸ್ಥಳೀಯ ಮುಖಂಡರಾದ ಮುರುಗೇಶ್, ಓಹಿಲೇಶ್, ಮುನಿಅಂಜಿ, ಮಂಜುನಾಥ್, ಮುನಿಯಪ್ಪ, ಗುತ್ತಿಗೆದಾರ ಸಂಜೀವ್ ರಾವ್ ಇದ್ದರು.