ಆರು ತಿಂಗಳಲ್ಲಿ ಒಂದು ಬಾರಿ ಜಂತು ನಿವಾರಕ ಮಾತ್ರೆ ನಿಮ್ಮ ಮಕ್ಕಳಿಗೆ ನುಂಗಿಸಿ: ಎನ್.ಎಸ್.ಮಂಜುನಾಥ

oplus_0

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.೧೬:ಆರು ತಿಂಗಳಲ್ಲಿ ಒಂದು ಬಾರಿ ಜಂತು ನಿವಾರಕ ಮಾತ್ರೆ ನಿಮ್ಮ ಮಕ್ಕಳಿಗೆ ನುಂಗಿಸಿ, ಬೆಳವಣಿಗೆ ಕುಂಠಿತವಾಗದಂತೆ ನೋಡಿಕೊಳ್ಳಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡಹಳ್ಳಿ ಗ್ರಾಮದಲ್ಲಿ ಬುಧವಾರ ಎರಡನೇ ಹಂತದ ಸಮುದಾಯ ಆಧಾರಿತ ರಾಷ್ಟ್ರೀಯ ಜಂತು ಹುಳ ನಿವಾರಣಾ ಕಾರ್ಯಕ್ರಮದಲ್ಲಿ ಮನೆ ಮನೆ ಭೇಟಿ, 1ನೇ ಹಂತದಲ್ಲಿ ಜಂತು ನಿವಾರಕ ಮಾತ್ರೆ ನುಂಗದೇ ಉಳಿದ ಮಕ್ಕಳಿಗೆ ಮೇ 13 ರಿಂದ 27 ರವರೆಗೆ ನಡೆಯುತ್ತಿರುವ ಸಮುದಾಯ ಆಧಾರಿತ ರಾಷ್ಟ್ರೀಯ ಜಂತು ಹುಳ ನಿವಾರಣಾ ಕಾರ್ಯಕ್ರಮದ ಅನುಷ್ಠಾನ ಪರಿಶೀಲಿಸಿ ಮಾಹಿತಿ ಶಿಕ್ಷಣ ನೀಡಿದರು.  ನಿಮ್ಮ ಮಕ್ಕಳಿಗೆ ಆರು ತಿಂಗಳಿಗೊಮ್ಮೆ ಜಂತುಹುಳ ನಿವಾರಣಾ ಮಾತ್ರೆ ನುಂಗಿಸಬೇಕು. ಜಂತುಹುಳು ಬಾದೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಕಲಿಕೆಯಲ್ಲಿ ಹಿಂದುಳಿಯುವಿಕೆ ಹಾಗೂ ರಕ್ತಹೀನತೆ ಉಂಟಾಗಿ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಮಣ್ಣಿನಲ್ಲಿ ಆಟವಾಡುವ ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ಕೈತೊಳೆಯುವ ಅಭ್ಯಾಸ ಇಲ್ಲದಿದ್ದರೆ ಜಂತುಬಾದೆ ಪ್ರಾರಂಭವಾಗುತ್ತದೆ. ಮಕ್ಕಳಿಗೆ ಮಣ್ಣಿನಲ್ಲಿ ಆಟವಾಡಿ ಬಂದ ನಂತರ, ಶೌಚಾಲಯ ಬಳಸಿದ ನಂತರ, ಊಟಕ್ಕೆ ಮೊದಲು ಮತ್ತು ಊಟದ ನಂತರ ಸಾಬೂನಿನಿಂದ ಕೈ ತೊಳೆಯುವ ಅಭ್ಯಾಸ ರೂಢಿ ಮಾಡಿ ಮಕ್ಕಳನ್ನು ಕಾಯಿಲೆಗಳಿಂದ ರಕ್ಷಿಸಿ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಅವರು ವೈಯಕ್ತಿಕ ಸ್ವಚ್ಛತೆ, ಕೈ ತೊಳೆಯುವ ವಿಧಾನದ ಬಗ್ಗೆ ತಿಳಿಸಿದರು. ಮನೆ ಮನೆ ಭೇಟಿಯಲ್ಲಿ ಮೊದಲ ಹಂತದಲ್ಲಿ ಜಂತು ಮಾತ್ರೆ ನುಂಗದೇ ಇರುವ 28 ಮಕ್ಕಳಿಗೆ ಜಂತು ಮಾತ್ರೆ ನುಂಗಿಸಲಾಯಿತು.  ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಸುಧಾ, ಆಶಾ ಕಾರ್ಯಕರ್ತೆ ಶಾರದ ಇದ್ದರು.