
ಕಲಬುರಗಿ,ಆ.3- ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತ ಲಘುವಾಗಿ ಮತ್ತು ಅವಹೇಳನಕಾರಿ ಮಾತನಾಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಮಹಾಂತಪ್ಪ ಕೆ.ಸಂಗಾವಿ ಅವರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯ ಹೀನಾಯ ಸೋಲಿನ ಹತಾಶೆಯಿಂದ ಹೊರಬರಲಾಗದ, ಆರಗ ಜ್ಞಾನೇಂದ್ರ ಅವರು, ತಲೆ ಮತ್ತು ಮನಸ್ಸಿಗೆ ಸಂಬಂಧವಿಲ್ಲದ ಬುದ್ಧಿ ಭ್ರಮಣೆಗೊಂಡವರಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿರುವ ಸಂಗಾವಿ, ಮಾಧ್ಯಮಗಳ ಮುಂದೆ ನಾಲಿಗೆ ಬಿಗಿಹಿಡಿದು ಮಾತನಾಡಬೇಕು.ಇದೆ ಚಾಳಿಯನ್ನು ಮುಂದುವರೆಸಿದ್ದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೇಂದ್ರದಲ್ಲಿ ಪ್ರಬಲ ಪೈಪೋಟಿ ನೀಡುವ, ಅನುಭವಿ ರಾಜಕಾರಣಿ, ಮುತ್ಸದ್ಧಿ ಹಾಗೂ ವಿಚಾರವಂತ ಮೇಧಾವಿಗಳು ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಹಗುರವಾಗಿ ಮಾತನಾಡಿರುವ ಆರಗ ಜ್ಞಾನೇಂದ್ರ ಅವರ ಈ ನಡೆ ಖಂಡನೀಯ, ಅವರು ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯನ್ನು ಯಾಚಿಸಬೇಕು ಎಂದು ಸಂಗಾವಿ ಅವರು ಒತ್ತಾಯಿಸಿದ್ದಾರೆ.