
ದೇವದುರ್ಗ,ಮೇ.೧೦- ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಸಮಾಜದಲ್ಲಿ ಶಾಂತಿ ನೆಲೆಸಲು ಪೊಲೀಸರು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಆರಕ್ಷಕರ ಬಗ್ಗೆ ಭಯ ಪಡುವ ಅಗತ್ಯವಿಲ್ಲ, ಗೌರವ ನೀಡಿದರೆ ಸಾಕು. ಸಮಾಜದ ಶಾಂತಿಗೆ ಜನರ ಸಹಕಾರ ಅಗತ್ಯ ಎಂದು ಪಿಐ ಕೆ.ಹೊಸಕೇರಪ್ಪ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಪ್ರತಿಯೊಬ್ಬರೂ ಕಾನೂನಿನ ಜ್ಞಾನ ಪಡೆಯಬೇಕು. ಜನರು ಪೊಲೀಸ್ ಠಾಣೆಗೆ ಬರಲು ಭಯಪಡುವ ಅಗತ್ಯವಿಲ್ಲ. ಠಾಣೆಗೆ ಭೇಟನೀಡಿ ಕಾಯ್ದೆ ಕಾನೂನು, ಪೊಲೀಸರ ಕರ್ತವ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು. ಕಾನೂನು ಜ್ಞಾನ ಪಡೆದವರು ಸಮಾಜದಲ್ಲಿ ಕಾನೂನು ಉಲ್ಲಂಘನೆ ಮಾಡುವುದಿಲ್ಲ.
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಾಗಿದ್ದರಿಂದ ಅವರಿಗೆ ಕಾನೂನು ಜ್ಞಾನ ನೀಡಲು ತೆರೆದಮನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳು ಕಾನೂನು ಅರಿವು ಪಡೆದು ತಮ್ಮ ಪಾಲಕರು, ನೆರೆಯ ಮನೆಯವರಿಗೆ ತಿಳಿಹೇಳಬೇಕಿದೆ. ನಿಮ್ಮ ಏರಿಯಾ, ಊರಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಮಹಿಳೆಯರ ರಕ್ಷಣೆಗೆ ದೂರವಾಣಿ ಸಂಖ್ಯೆ ೧೧೨ಗೆ ಕರೆಮಾಡಿದರೆ ತಕ್ಷಣದಲ್ಲಿ ಸಹಾಯಕ್ಕೆ ಬರಲಾಗುವುದು ಎಂದರು.
ಪಿಎಸ್‌ಐ ಉಮೇರಾಭಾನು, ಹಿರಿಯಪೊಲೀಸ್ ಪೇದೆ ಮಹಮ್ಮದ್ ಪಾಷಾ, ಖಾಜಾ ಹುಸೇನ್, ಮರಸಣ್ಣ, ಸಿಬ್ಬಂದಿ ನಾಗರಾಜ, ಶಿವಾನಂದ, ಶಿವು ಚೌವ್ಹಾಣ್, ರಿಯಾಜ್, ಚಿದಾನಂದ ಇತರರಿದ್ದರು.