ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಚಿಕಿತ್ಸೆಗೆ ಮುಂದಾಗಲು ಸಲಹೆ

ಕಲಬುರಗಿ,ಫೆ 4: ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್, ಗರ್ಭಕೋಶ ಕಂಠ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಲಭ್ಯವಿದ್ದು, ಆಗಾಗ ಕ್ಯಾನ್ಸರ್ ತಪಾಸಣೆ ಮಾಡಿಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಬೆಂಗಳೂರಿನ ನಾರಾಯಣ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ವಿದ್ಯಾಭೂಷಣ ಹಾಗೂ ಡಾ.ರೋಹಿತ್ ರಾನಡೆ ಹೇಳಿದರು.
ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ರೀತಿಯ ಕ್ಯಾನ್ಸರ್ ಆಗಿದ್ದರೂ ಸರಿ; ಅದಕ್ಕೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ಸಮಸ್ಯೆಯಿಂದ ಶಾಶ್ವತ ಪರಿಹಾರ ಲಭಿಸುತ್ತದೆ ಎಂದರು.
ಇತ್ತೀಚೆಗೆ ಕೇವಲ 20ರಿಂದ 30 ವರ್ಷದೊಳಗಿನ ಮಹಿಳೆಯರಲ್ಲಿ ಈ ನಾಲ್ಕರ ಪೈಕಿ ಯಾವುದಾದರೂ ಒಂದು ಕ್ಯಾನ್ಸರ್ ಪತ್ತೆಯಾಗುತ್ತಿದೆ. ಹಾಗಾಗಿ, ಆಗಾಗ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡುವುದರಿಂದ ಸಾವಿನ ಪ್ರಮಾಣ ತಗ್ಗಿಸಬಹುದಾಗಿದೆ ಎಂದು ನುಡಿದರು.
ಸಾಮಾನ್ಯವಾಗಿ ಕ್ಯಾನ್ಸರ್‍ಗೆಕೈಗೊಳ್ಳುವ ಶಸ್ತ್ರಚಿಕಿತ್ಸೆಯ ಕುರಿತಾಗಿ ಜನರಲ್ಲಿ ಹೆಚ್ಚು ಭಯವಿದೆ. ಈಗ ಕಾಲ ಬದಲಾಗಿದೆ. ಕೈ ಮೂಲಕ ಕೈಗೊಳ್ಳುವ ಶಸ್ತ್ರಚಿಕಿತ್ಸೆ ಬೇಡ ಎನ್ನುವುದಾದರೆ ರೋಬೋಟಿಕ್ ತಂತ್ರಜ್ಞಾನದ ಮೂಲಕ ಯಶಸ್ವೀ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.ಅಂಡಾಶಯ (ಓವೆರಿಯನ್) ಕ್ಯಾನ್ಸರ್‍ಗೆ ಸಾಮಾನ್ಯವಾಗಿ 8-10 ತಾಸು ಶಸ್ತ್ರಚಿಕಿತ್ಸೆ ಕೈಗೊಳ್ಳುವುದು ಬಿಟ್ಟರೆ ಉಳಿದಂತೆ ಎಲ್ಲ ಶಸ್ತ್ರಚಿಕಿತ್ಸೆಗಳು ಕೇವಲ ಒಂದೆರಡು ತಾಸಿನಲ್ಲಿ ಮುಗಿಯುತ್ತದೆ. ಮೇಲಾಗಿ, ಆಸ್ಪತ್ರೆಯಲ್ಲಿ ಕೇವಲ ಎರಡು ದಿನ ಉಳಿದ ನಂತರ ಡಿಸ್ಚಾರ್ಜ್ ಆಗಬಹುದು. ಇನ್ನು, ಶಸ್ತ್ರಚಿಕಿತ್ಸೆಗೆ ತಗಲುವ ಖರ್ಚು ಕೂಡ ಅತ್ಯಂತ ಕಡಿಮೆ. ಮೇಲಾಗಿ, ತಮ್ಮ ಆಸ್ಪತ್ರೆಯಲ್ಲಿ ಸರಕಾರದ ಬೇರೆ ಬೇರೆ ಆರೋಗ್ಯ ಯೋಜನೆಗಳ ಅಡಿಯಲ್ಲಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಜನರು ಇದರ ಲಾಭ ಪಡೆಯಬೇಕೆಂದು ಅವರು ಮನವಿ ಮಾಡಿದರು.ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿ ಔಷಧಿಗಳು ಲಭ್ಯವಿದೆ. ಹೀಗಾಗಿ ಸಮಸ್ಯೆ ಇರುವವರು ಆದಷ್ಟು ಬೇಗ ಚಿಕಿತ್ಸೆ ಪಡೆಯಬೇಕೆಂದು ಅವರು ಸಲಹೆ ನೀಡಿದರು.
ಡಾ.ಶೋಭಾ ಬಡಿಗೇರ ಹಾಗೂ ಗೋಪಾಲ ಇದ್ದರು.