ಆರಂಭಿಕ ಬಾಲ್ಯದ ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ

ಚಿತ್ರದುರ್ಗ.ನ.೧೨: ಪರಿಣಾಮಕಾರಿ ಪೂರ್ವಬಾಲ್ಯದ ಶಿಕ್ಷಣದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಡಯಟ್ ಉಪನ್ಯಾಸಕ ಎಂ.ರಂಗನಾಥ್ ತಿಳಿಸಿದರು. ಅವರು ಪೂರ್ವಬಾಲ್ಯ ಶಿಕ್ಷಣ ಪದ್ಧತಿಯ ಅಧ್ಯಯನ ನಡೆಸಲು ಡಿ.ಎಲ್.ಇಡಿ ಶಿಕ್ಷಣಾರ್ಥಿಗಳ ಜೊತೆ ನಗರದ ಜೆಟ್‌ಪಟ್ ನಗರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು. ಬೌದ್ಧಿಕ ವಿಕಾಸಕ್ಕೆ ಪ್ರಾರಂಭಿಕ ಶಿಕ್ಷಣ ಮುಖ್ಯವಾಗಿದೆ ಎಂದು ತಿಳಿಸಿದರು.  ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಶಿಕ್ಷಣ ಬದುಕಿಗೆ ದಾರಿದೀಪವಾಗಿದೆ. ಭವಿಷ್ಯದ ಶಿಕ್ಷಣದ ಸಫಲತೆ ಪಡೆಯಲು ಆರಂಭಿಕ ಬಾಲ್ಯದ ಶಿಕ್ಷಣ ಅಗತ್ಯವಾಗಿದೆ. ರಾಷ್ಟಿçÃಯ ಶಿಕ್ಷಣ ನೀತಿ-2020ರಲ್ಲಿ ಬಾಲ್ಯದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು ವಿದ್ಯಾರ್ಥಿ ಸ್ನೇಹಿ ಕಲಿಕಾ ವಾತಾವರಣದ ವಿನ್ಯಾಸ ರೂಪಿಸಲಾಗಿದೆ. ಬಾಲ್ಯದ ಹಂತದಲ್ಲಿ ಮೂಲ ಸಾಕ್ಷರತೆ, ಸಂಖ್ಯಾಜ್ಞಾನ ಬೆಳೆಸಲು ಅವಕಾಶ ಕಲ್ಪಿಸಲಾಗಿದ್ದು ಆಟಿಕೆಗಳು, ಕಲಿಕಾ ಸಾಮಗ್ರಿಗಳ ಬಳಕೆಯಿಂದ ಬೋಧನೆ ಮಾಡುವುದರಿಂದ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದರು. ಉಪನ್ಯಾಸಕ ಎನ್,ಮಂಜುನಾಥ್, ದೈಹಿಕ ಶಿಕ್ಷಣ ಶಿಕ್ಷಕಿ ಎಂ.ವಿ.ಶೋಭಾರಾಣಿ, ಶಿಕ್ಷಕಿ ಲೀಲಾವತಿ, ಗೋವಿಂದಮ್ಮ, ಶಿಕ್ಷಣಾರ್ಥಿಗಳಾದ ಸಿದ್ದೇಶ್, ರೂಪಾ, ಸುಚಿತ್ರ, ಸುಪ್ರಿಯಾ, ರೋಜಾ ಇದ್ದರು.