ಆರಂಭಾವಸ್ಥೆಗೊಂದು ಯೋಗ ಪಥ- ಪುಸ್ತಕ ಬಿಡುಗಡೆ


ಬಳ್ಳಾರಿ, ಏ.22: ನಗರದ ಯೋಗಶ್ರೀ ಅಯ್ಯಂಗಾರ್ ಯೋಗ ಕೇಂದ್ರವು ಆರಂಭಗೊಂಡು ಹತ್ತು ವರ್ಷಗಳನ್ನು ಪೂರೈಸಿದ ಶಮಾನೋತ್ಸವ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಗಳಾದ ಶ್ರೀರಾಜಶೇಖರಜೀ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಾರತೀಯ ಋಷಿಮುನಿಗಳು ನೀಡಿದ ಅನೇಕ ಕೊಡುಗೆಗಳಲ್ಲಿ ಯೋಗ ಒಂದಾಗಿದ್ದು, ಪ್ರಸ್ತುತ ಸಮಾಜದಲ್ಲಿ ಎಲ್ಲರಿಗೂ ಅತ್ಯಂತ ಅವಶ್ಯವಾಗಿದೆ. ತಂತ್ರಜ್ಞಾನದ ಉತ್ತುಂಗದಲ್ಲಿರುವ ನಾವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಯೋಗವಿದ್ಯೆಯು ಜೀವನ ಒಂದು ಕಲೆಯಾಗಿದ್ದು ಎಲ್ಲರೂ ಅದನ್ನು ಅನುಸರಿಸಬಹುದಾಗಿದೆ. ಯೋಗಕೇಂದ್ರವು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತಿದ್ದು, ಇನ್ನೂ ಎತ್ತರ ಬೆಳೆಯಲಿ ಎಂದು ಆಶಿಸಿದರು. ಯೋಗ ಕೇಂದ್ರದ ಸಂಸ್ಥಾಪಕರು ಮತ್ತು ಲೇಖಕರಾದ ಶ್ರೀ ವಿರೂಪಾಕ್ಷಡಾಣಿ ಯೋಗ ಕೇಂದ್ರ ಮತ್ತು ಪುಸ್ತಕ ಬಗ್ಗೆ ಮಾತನಾಡಿದರು. ನಮ್ಮ ಯೋಗ ಕೇಂದ್ರವು ಜನರಲ್ಲಿ ಆರೋಗ್ಯದ ಕಾಳಜಿಯನ್ನು ಮೂಡಿಸುವುದಲ್ಲದೆ ಪ್ರತಿವರ್ಷ ಅಂತರಾಷ್ಟ್ರೀಯ ಯೋಗದಿನದಂದು ಉಚಿತ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಬಿಡುಗಡೆಗೊಂಡ ಪುಸ್ತಕವು ಎಲ್ಲರಿಗೂ ಅತ್ಯಂತ ಉಪ ಯುಕ್ತವಾಗಿದೆ. 300ಕ್ಕೂ ಹೆಚ್ಚು ಆಸನಗಳ ಚಿತ್ರಗಳಿದ್ದು, ಸರಿಯಾದ ವಿವರಣೆ ಮತ್ತು ಎಚ್ಚರಿಕೆ ಹಾಗೂ ಅವುಗಳಿಂದಾಗುವ ಪ್ರಯೋಜನಗಳನ್ನು ವಿವರಿಸಿದೆ. ಆರಂಭದ ಅಭ್ಯಾಸಕರಿಗೆ ಇದು ಉತ್ತಮ ಕೈಗನ್ನಡಿಯಂತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಯೋಗ ಸಾಧಕರು ಆಸನಗಳ ಪ್ರದರ್ಶನ ಮಾಡಿದರು.ಕಾರ್ಯಕ್ರಮವನ್ನು ವಿಕ್ರಮ್.ಕೆ ಮತ್ತು ಶ್ರೀನಿವಾಸ್ ನಿರ್ವಹಿಸಿದರು. ಮೌಕ್ತಿಕ ಮತ್ತು ಹರ್ಷಿಣಿ ಪ್ರಾರ್ಥಸಿದರು.ಪ್ರಸ್ತಾವನೆ ಶ್ರೀನಿವಾಸ್ ರಾವ್, ಸ್ವಾಗತ ಪರಿಚಯ ಸುಜಾತ ಪೋಲಾ ವಂದನಾರ್ಪಣೆ ವಿಜಯ ಲಕ್ಷ್ಮೀ ಎಸ್ ಮಾಡಿದರು.