ಆರಂಭವಾಗದ ಹೈಟೆಕ್ ಸರ್ಕಾರಿ ಶಾಲಾ ಕಟ್ಟಡ : ನಾಗರೀಕರ ಆಕ್ರೋಶ!

ಶಿವಮೊಗ್ಗ, ಮೇ 31: ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆವತಿಯಿಂದ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಕಲ ಸೌಲಭ್ಯ ಹೊಂದಿರುವ ಮೌಲಾನಾ ಆಜಾದ್ ಮಾದರಿ ಶಾಲಾ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸದಿರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.ಈ ಸಂಬಂಧ ಜಿಲ್ಲಾ ಶೋಷಿತ ಸಮುದಾಯ ವೇದಿಕೆಯು ಮಂಗಳವಾರ ಜಿಲ್ಲಾ ಪಂಚಾಯ್ತಿ ಕಚೇರಿ ಕಟ್ಟಡದಲ್ಲಿಲ್ಲಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಅರ್ಪಿಸಿ, ಶಾಲಾ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಒತ್ತಾಯಿಸಿದೆ.
ಅತ್ಯಂತ ಆಕರ್ಷಕವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಶೈಕ್ಷಣಿಕ ಚಟುವಟಿಕೆ ಆರಂಭಿಸಿಲ್ಲ. ಇದರಿಂದ ಕಟ್ಟಡ ಪಾಳು ಬೀಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಟನೆ ದೂರಿದೆ.ತಕ್ಷಣವೇ ಸದರಿ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಆಡಳಿತ ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.ಮನವಿ ಅರ್ಪಿಸುವ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮಕ್ಬುಲ್ ಅಹಮದ್, ಮುಖಂಡರಾದ ದಾದಾ ಖಲಂದರ್, ಎಂ.ಡಿ.ಶಫೀ, ಮಹಮ್ಮದ್ ಅಲಿ, ಸಯ್ಯದ್ ಜಬೀರ್, ಅನ್ಸರ್ ಪಾಶ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.