ಆಯೋಗದ ವರದಿ ವಿಸ್ತರಣೆ

ಬೆಂಗಳೂರು, ನ. ೨೨- ಜಾತಿಗಣತಿ ವರದಿಯನ್ನು ೨-೩ ದಿನಗಳಲ್ಲಿ ಸಲ್ಲಿಕೆ ಮಾಡಲು ಹಿಂದುಳಿದ ವರ್ಗಗಳ ಆಯೋಗ ಮುಂದಾಗಿರುವಾಗಲೇ ಜಾತಿಗಣತಿ ವರದಿಯ ಮೂಲಪ್ರತಿ ಕಾಣೆಯಾಗಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗಡೆ ಅವರು ಸರ್ಕಾರಕ್ಕೆ ೨೦೨೧ರ ಅಕ್ಟೋಬರ್ ೫ ರಂದು ಪತ್ರ ಬರೆದಿರುವುದು ವೈರಲ್ ಆಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅವಧಿಯನ್ನು ವಿಸ್ತರಿಸಿ ಮರು ಸಮೀಕ್ಷೆ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದೆ.
ಜಾತಿ ಗಣತಿ ವರದಿಯ ಮರು ಸಮೀಕ್ಷೆಗೆ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ವಿಸ್ತರಿಸುವ ಸಂಬಂಧ ತೀರ್ಮಾನ ಕೈಗೊಳ್ಳಲು ನಾಳೆ ಸಚಿವ ಸಂಪುಟದ ತುರ್ತು ಸಭೆಯನ್ನು ಕರೆಯಲಾಗಿದ್ದು, ನಾಳಿನ ಸಚಿವ ಸಂಪುಟ ಸಭೆಯಲ್ಲಿ ಆಯೋಗದ ಅವಧಿ ವಿಸ್ತರಣೆ ಮರು ಸಮೀಕ್ಷೆ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
ಈಗಿರುವ ಜಯಪ್ರಕಾಶ್ ಹೆಗಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಅವಧಿ ನವೆಂಬರ್ ೨೬ ರಂದು ಮುಗಿಯಲಿದ್ದು ಅಷ್ಟರೊಳಗೆ ಅಂದರೆ ಈ ತಿಂಗಳ ೨೪ ಇಲ್ಲವೆ ೨೫ ರಂದು ೨೦೧೫ರಲ್ಲಿ ಆಯೋಗ ನಡೆಸಿದ್ದ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಆಯೋಗ ಮುಂದಾಗಿದೆ. ಆದರೆ ಮೂಲ ಹಸ್ತಪ್ರತಿಯೇ ಇಲ್ಲದಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಜಯಪ್ರಕಾಶ್ ಹೆಗಡೆ ಅವರು ಈ ಹಿಂದೆಯೇ ಸರ್ಕಾರಕ್ಕೆ ಮುಂದೇನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟನೆ ಕೋರಿ ಬರೆದಿದ್ದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಾತಿ ಗಣತಿ ವರದಿ ಸಲ್ಲಿಕೆಗೆ ಆಯೋಗ ಮುಂದಾಗಿರುವಾಗಲೇ ಈ ಪತ್ರ ವೈರಲ್ ಆಗಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದ್ದು, ಆಯೋಗ ಈ ತಿಂಗಳ ೨೪ ಇಲ್ಲವೆ ೨೫ ರಂದು ವರದಿ ಸಲ್ಲಿಸುತ್ತದೆಯೇ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ. ಜತೆಗೆ ಸರ್ಕಾರ ಕೂಡಾ ಆಯೋಗದ ಅವಧಿಯನ್ನು ವಿಸ್ತರಿಸಿ ಮರು ಸಮೀಕ್ಷೆ ಮಾಡಲು ತೀರ್ಮಾನ ಮಾಡುವ ಸಾಧ್ಯತೆಯೂ ಇರುವುದರಿಂದ ಆಯೋಗದ ವರದಿ ಸಲ್ಲಿಕೆಯ ಬಗ್ಗೆಯೂ ಅನುಮಾನಗಳು ಮೂಡಿವೆ.
ಜಾತಿಗಣತಿ ವರದಿ ಜಾರಿಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗಾಗಲೇ ಹೇಳಿ, ನವೆಂಬರ್‌ನಲ್ಲಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡುವಂತೆ ಹೇಳಿದ್ದೇನೆ ಎಂದಿದ್ದರು. ಮುಖ್ಯಮಂತ್ರಿಗಳ ಸೂಚನೆಯಂತೆ ಆಯೋಗ ತನ್ನ ಅವಧಿ ಮುಗಿಯುವ ಒಳಗೆ ಅಂದರೆ ನ. ೨೬ ರೊಳಗೆ ವರದಿ ಸಲ್ಲಿಸಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಇನ್ನೂ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಇದರ ನಡುವೆ ಮೂಲ ಹಸ್ತಪ್ರತಿ ಕಳೆದಿರುವ ಬಗ್ಗೆ ಅಧ್ಯಕ್ಷರು ಸರ್ಕಾರಕ್ಕೆ ಈ ಹಿಂದೆ ಬರೆದಿದ್ದ ಪತ್ರ ವೈರಲ್ ಆಗಿರುವುದು ವಿವಾದಕ್ಕೆ ಕಾರಣವಾಗಿದೆ.
ಜಾತಿಗಣತಿಗೆ ಪ್ರಬಲ ಸಮುದಾಯದ ವಿರೋಧ ಜಾತಿಗಣತಿ ವೈಜ್ಞಾನಿಕವಾಗಿ ನಡೆದಿಲ್ಲ. ಜಾತಿಗಣತಿಯನ್ನು ಜಾರಿ ಮಾಡಬಾರದು ಎಂದು ಪ್ರಬಲ ಸಮುದಾಯಗಳಾದ ಒಕ್ಕಲಿಗ ಹಾಗೂ ಲಿಂಗಾಯತ ಸಂಘಟನೆಗಳು ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಮಾಡಿದ್ದಾರೆ.
ಆದರೆ, ಹಿಂದುಳಿದ ವರ್ಗಗಳ ಸಮುದಾಯದ ಸಂಘಟನೆಗಳು ಜಾತಿ ಗಣತಿಗೆ ಒತ್ತಾಯಿಸಿವೆ. ಇವೆಲ್ಲಾ ಸರ್ಕಾರವನ್ನು ಸಂದಿಗ್ಧದಲ್ಲಿ ಸಿಲುಕಿಸಿದೆ.
ಲೋಕಸಭಾ ಚುನಾವಣೆ ಹತ್ತಿರ ಇರುವುದರಿಂದ ಜಾತಿಗಣತಿ ವರದಿಗೆ ಕೈ ಹಾಕುವುದು ಜೇನುಗೂಡಿಗೆ ಕೈ ಹಾಕಿದಂತೆ ಎಂದು ಅರಿತಿರುವ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದು, ಆಯೋಗದ ಅವಧಿಯನ್ನು ವಿಸ್ತರಿಸುವ ಮೂಲಕ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾಗುವ ಲೆಕ್ಕಾಚಾರದಲ್ಲಿದೆ.

ಜಾತಿಗಣತಿ ವಿರೋಧಿಸಿ ಒಕ್ಕಲಿಗ ಸಮುದಾಯ ಕೈಗೊಂಡಿದ್ದ ತೀರ್ಮಾನದ ಪತ್ರಕ್ಕೆ ತಾನು ಸಹಿ ಮಾಡಿದ್ದೇನೆ ನಿಜ. ಮಾಡಿದರೆ ತಪ್ಪೇನು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರಂದಿಗೆ ಮಾ ನಮ್ಮ ಸಮುದಾಯದ ತೀರ್ಮಾನಕ್ಕೆ ನಾನು ಬದ್ಧನಾಗಿ ಸಹಿ ಹಾಕಿದ್ದೇನೆ. ಸಹಿ ಹಾಕಿದರೆ ತಪ್ಪೇನು. ಆದಜರ ಜಾತಿ ಗಣತಿ ಸಮೀಕ್, ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳ ಆಗ್ರಹ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ ಕಾಂತರಾಜು ಅವರ ಅವಧಿಯಲ್ಲಿ ನಡೆದಿದ ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡದಂತೆ ಒಕ್ಕಲಿಗ ಸಮುದಾಯ ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರ ಸಭೆ ನಡೆಸಿ ತೀರ್ಮಾನ ಕೈಗೊಂಡಿತ್ತು.
ಜಾತಿಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ನಿಲುವು. ಆ ನಿಲುವಿಗೆ ನಾನು ಬದ್ಧನಾಗಿದ್ದೇನೆ. ರಾಜಕೀಯ ಪಕ್ಕಕ್ಕಿಟ್ಟು, ನಮ್ಮ ಸಮಾಜ ಅದರ ಗೌರವ, ಅಭಿಮಾನ ಉಳಿಸಿಕೊಳ್ಳಲು ಸಮಾಜದ ಸಭೆಯಲ್ಲಿ ಭಾಗವಹಿಸಿದ್ದೆ ಎಂದು ಅವರು ಹೇಳಿದರು.