‘ಆಯುಷ್-೬೪’ ಕೊರೊನಾ ನಿಗ್ರಹಕ್ಕೆ ಅಸ್ತು

ಪುತ್ತೂರು, ಜೂ.೧೦- ಕಳೆದ ಒಂದೂವರೆ ವರ್ಷದಿಂದ ದೇಶದ ಜನತೆಗೆ ಕಾಟ ನೀಡುತ್ತಿರುವ ಕೊರೊನಾ ನಿಗ್ರಹಕ್ಕೆ ಸರ್ಕಾರ ಇನ್ನಿಲ್ಲದ ಶ್ರಮವನ್ನು ಹಾಕುತ್ತಿದೆ. ಲಾಕ್ಡೌನ್, ಸಾಮಾಜಿಕ ಅಂತರ, ಮಾಸ್ಕ್ ಸಹಿತ ಎಚ್ಚರಿಕೆ ಕ್ರಮಗಳ ಜತೆಗೆ ವಿವಿಧ ಔಷಧ ಕಂಪನಿಗಳು ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಕ್ರಿಯೆಗೆ ಮುಂದಾಗಿದೆ. ಈಗಾಗಲೇ ಕೊರೋನಾ ಹೆಮ್ಮಾರಿಯನ್ನು ಹೆಡೆಮುರಿ ಕಟ್ಟುವ ಔಷಧಿಯನ್ನು ಸೃಷ್ಟಿಸುವಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಓ) ‘೨ಡಿಜಿ ಮೆಡಿಸಿನ್’ ಕಂಡು ಹುಡುಕುವಲ್ಲಿ ಸಫಲವಾಗಿದೆ. ಇದೇ ರೀತಿ ಆಯುಷ್ ಮಂತ್ರಾಲಯ ‘ಆಯುಷ್-೬೪’ ಎಂಬ ಹೆಸರಿನ ಮಾತ್ರೆಯನ್ನು ಕೊರೋನಾ ಸೋಂಕಿತರಿಗೆ ನೀಡಲು ತೀರ್ಮಾನಿಸಿದ್ದು, ಈ ಆಯುಷ್-೬೪ ದಕ್ಷಿಣಕನ್ನಡದ ಪುತ್ತೂರಿನಲ್ಲಿ ಕೊಡುಗೆಯಾಗಿದೆ. ಈ ಮಾತ್ರೆಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಕೊರೋನಾ ಸೋಂಕಿತರಿಗಾಗಿ ಲಭ್ಯವಿರುವ ‘ಆಯುಷ್-೬೪’ ಮಾತ್ರೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ತಯಾರಿಸಲಾಗುತ್ತಿದೆ. ಈಗಾಗಲೇ ದೇಶದಲ್ಲಿ ಕೊರೋನಾ ತಡೆಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ವೇಗ ನೀಡಲಾಗಿದ್ದು, ಲಸಿಕೆಯ ಜೊತೆಗೆ ಮಾತ್ರೆಗಳ ಮೂಲಕವೂ ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಆಯುಷ್ ಮಂತ್ರಾಲಯ ಇದೀಗ ‘ಆಯುಷ್-೬೪’ ಎನ್ನುವ ಮಾತ್ರೆಯನ್ನು ಕೊರೋನಾ ಪಾಸಿಟಿವ್ ಸೋಂಕಿತರಿಗೆ ನೀಡಲು ಮುಂದಾಗಿದೆ.
ಪ್ರಮಾಣೀಕೃತ ಮಾತ್ರೆ
ದೇಶದ ೯ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಕೊರೋನಾ ಸೋಂಕು ತಡೆಗೆ ಈ ಮಾತ್ರೆಗಳು ಪರಿಣಾಮಕಾರಿ ಎನ್ನುವ ವರದಿಯನ್ನೂ ನೀಡಿದ್ದು, ಈ ಮಾತ್ರೆಗಳು ಈಗಾಗಲೇ ದೇಶದಾದ್ಯಂತ ಬಳಕೆಗೆ ಸಿಗಲಿದೆ. ಕಳೆದ ೩೦ ವರ್ಷಗಳಿಂದ ಆಯುರ್ವೇದ ಔಷಧಿಗಳ ತಯಾರಿಯಲ್ಲಿ ನಿರತವಾಗಿರುವ ಪುತ್ತೂರಿನ ಮುಂಡೂರಿನಲ್ಲಿರುವ ಎಸ್.ಡಿ.ಪಿ. ರೆಮೆಡೀಸ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಈ ಮಾತ್ರೆಗಳು ತಯಾರಾಗುತ್ತಿದೆ. ‘ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಆಯುರ್ವೇದ ಸೈನ್ಸ್’ ಮತ್ತು ‘ನ್ಯಾಷನಲ್ ರಿಸರ್ಚ್ ಡೆವಲಪ್‌ಮೆಂಟ್ ಕಾರ್ಪೋರೇಷನ್(ಎನ್‌ಆರ್‌ಡಿಸಿ)’ ಇದರಿಂದ ಪ್ರಮಾಣೀಕರಿಸಲ್ಪಟ್ಟಿರುವ ಈ ಮಾತ್ರೆಯು ಕೋವಿಡ್ ಸೋಂಕಿತನ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ ಎನ್ನುವ ಸಂಶೋಧನೆಯನ್ನೂ ಹಲವು ಸಂಶೋಧನಾ ಸಂಸ್ಥೆಗಳು ನಡೆಸಿವೆ. ಕೊರೋನಾ ಲಕ್ಷಣಗಳು ಕಂಡು ಬಂದ ರೋಗಿಯನ್ನು ಕೊರೋನಾದಿಂದ ಶೀಘ್ರವೇ ಗುಣಮುಖವಾಗಿಸುವಲ್ಲಿ, ಆಸ್ಪತ್ರೆಯಿಂದ ಚೇತರಿಸಿಕೊಳ್ಳುವಂತೆ ಮಾಡುವ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲದ ಈ ಮಾತ್ರೆ ತನ್ನ ಕೆಲಸ ನಿರ್ವಹಿಸುತ್ತದೆ ಎನ್ನುವ ವರದಿಯನ್ನು ಹಲವು ಸಂಶೋಧನಾ ಸಂಸ್ಥೆಗಳು ನೀಡಿದೆ.
ಎಸ್.ಡಿ.ಪಿ. ರೆಮಿಡೀಸ್
ಕಳೆದ ೩೦ ವರ್ಷಗಳಿಂದ ಆಯುರ್ವೇದ ಔಷಧಿಗಳನ್ನು ತಯಾರಿಸಿಕೊಂಡು ಬರುತ್ತಿರುವ ಎಸ್.ಡಿ.ಪಿ. ರೆಮಿಡೀಸ್ ಎಂಡ್ ರಿಸರ್ಚ್ ಸೆಂಟರ್ ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಇಮ್ಯುನಿಟಿ ಹೆಚ್ಚಿಸುವ ಮಾತ್ರೆಗಳನ್ನು ತಯಾರಿಸುವ ಮೂಲಕ ಹಾಗೂ ಅವುಗಳನ್ನು ಕೊರೋನಾ ಫ್ರಂಟ್‌ಲೈನ್ ವಾರಿಯರ್ಸ್‌ಗಳಿಗೆ ನೀಡುವ ಮೂಲಕ ಕೊರೋನಾ ನಿಯಂತ್ರಣದಲ್ಲಿ ತನ್ನ ಪಾತ್ರವನ್ನು ವಹಿಸಿತ್ತು. ಆಯುಷ್ ಮಂತ್ರಾಲಯದಿಂದ ಪರಿಚಯಿಸಲ್ಪಟ್ಟ ಈ ಮಾತ್ರೆಯ ಸಿದ್ಧತೆ ಇದೇ ಸಂಶೋಧನಾ ಘಟಕದಲ್ಲಿ ನಡೆಯುತ್ತಿದ್ದು, ಆಯುಷ್ ಮಂತ್ರಾಲಯದ ಸಂಶೋಧಕರು ಸೂಚಿಸಿದ ಪ್ರಮಾಣದ ವಸ್ತುಗಳನ್ನು ಹಾಕುವ ಮೂಲಕ ಮಾತ್ರೆಗಳನ್ನು ತಯಾರಿಸಲಾಗುತ್ತಿದೆ.
ಸುಮಾರು ೩೫ ಬಗೆಯ ಆಯುರ್ವೇದ ಔಷಧೀಯ ವಸ್ತುಗಳನ್ನು ಈ ಮಾತ್ರೆ ತಯಾರಿಸಲು ಬಳಸಲಾಗುತ್ತಿದ್ದು, ಇವುಗಳು ಕೊರೋನಾದ ವಿವಿಧ ಪ್ರಕಾರದ ವೈರಾಣುಗಳ ವಿರುದ್ಧ ಪ್ರಭಾವಶಾಲಿಯಾಗಿ ಬಳಕೆಯಾಗುತ್ತದೆ ಎನ್ನುವುದನ್ನೂ ಪ್ರಮಾಣೀಕರಿಸಲಾಗಿದೆ. ಕೋವಿಡ್‌ನ ಸಾಮಾನ್ಯ ಲಕ್ಷಣ ಹೊಂದಿರುವ ವ್ಯಕ್ತಿ ಅಥವಾ ‘ಎ’ ಲಕ್ಷಣಗಳು ಹೊಂದಿರುವ ವ್ಯಕ್ತಿಯು ಪಾಸಿಟಿವ್ ವರದಿ ಬಂದ ೭ ದಿನಗಳ ಬಳಿಕ ಈ ಮಾತ್ರೆಯನ್ನು ಆಯುರ್ವೇದ ವೈದ್ಯರ ಸೂಚನೆಯ ಮೇರೆಗೆ ಸೇವಿಸಬಹುದಾಗಿದೆ.


೨೦ ದಿನಗಳ ಕಾಲ ಸೇವಿಸಿ
ಕೊರೋನಾದಿಂದ ಶ್ವಾಸಕೋಶದ ಸಮಸ್ಯೆಯು ಹೆಚ್ಚಾಗಿದ್ದು, ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಗುಣಪಡಿಸುವ ಸಾಮರ್ಥ್ಯವನ್ನು ‘ಆಯುಷ್-೬೪’ ಮಾತ್ರೆ ಹೊಂದಿದೆ. ೬೦ ಮಾತ್ರೆಗಳ ಒಂದು ಪ್ಯಾಕೇಟ್ ದರ ರೂ. ೪೮೦ ಆಗಿದೆ. ಕೊರೋನಾ ಪಾಸಿಟಿವ್ ಇರುವ ವ್ಯಕ್ತಿ ದಿನಕ್ಕೆ ೨ ರಂತೆ ೨೦ ದಿನಗಳ ಕಾಲ ಈ ಮಾತ್ರೆಯನ್ನು ಸೇವಿಸಬೇಕಾಗುತ್ತದೆ.
ಡಾ. ಹರಿಕೃಷ್ಣ ಪಾಣಾಜೆ
ಎಸ್.ಡಿ.ಪಿ. ರೆಮೆಡೀಸ್ ಎಂಡ್ ರಿಸರ್ಚ್‌ನ ನಿರ್ದೇಶಕ