ಆಯುಷ್ ವೈದ್ಯಾಧಿಕಾರಿಗಳ ಸಂಘದಿಂದ ಸಿಎಂಗೆ ಮನವಿ

ಹೊಸಪೇಟೆ ಮೇ29: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿಯೇ ಬಂದರೂ ಆಯುಷ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಆಯುಷ್ ವೈದ್ಯಾಧಿಕಾರಿಗಳ ವಿಜಯನಗರ ಜಿಲ್ಲಾ ಘಟಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಹೊಸಪೇಟೆಯ ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರ ಮೂಲಕ ಶನಿವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಡಾ.ಪಿ. ಮುನಿವಾಸುದೇವರೆಡ್ಡಿ ನೇತೃತ್ವದ ವೈದ್ಯಾಧಿಕಾರಿಗಳು ಇಲಾಖೆಯ ಎಲ್ಲಾ ಹಂತದಲ್ಲಿಯೂ ನಮ್ಮ ಸೇವೆಯನ್ನು ಪಡೆಯುತ್ತಿದ್ದರೂ ವೇತನ-ಭತ್ಯ-ಸ್ಥಾನಮಾನಗಳನ್ನು ನೀಡುವಾಗ ಮಾತ್ರ ಆಯುಷ್ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ಎಂದು ಆದೇಶ ನೀಡುತ್ತಿರುವುದು ವಿಷಾಧನೀಯ, ಕರೋನಾ ಮಹಾಮಾರಿಯ ಸಂದರ್ಭದಲ್ಲಿಯೂ ನಮ್ಮ ಸೇವೆಯನ್ನು ಹಿಂಜರಿಯದೆ ಪಡೆಯುತ್ತಿದ್ದರೂ ಮತ್ತು ಹಿಂದೆ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಆಯುಷ್ ವೈದ್ಯಾಧಿಕಾರಿಗಳ ಸಮಾನವಾಗಿ ಕಾಣುವ ಭರವಸೆ ನೀಡಿದ್ದರೂ ಆದೇಶಗಳಲ್ಲಿ ಮಾತ್ರ ಆಯುಷ್ ಇಲಾಖೆಯ ಸೇವೆಯಲ್ಲಿರುವವರನ್ನು ಹೊರತುಪಡಿಸಿ ಎನ್ನುತ್ತಿರುವುದು ವಿಷಾದನೀಯ.
ಈ ಹಿನ್ನೆಲೆಯಲ್ಲಿ ಇಂದು ರಾಜ್ಯವಾಪಿ ಈ ಮನವಿಯನ್ನು ನೀಡುತ್ತಿದ್ದು ಇದು ಪೂರೈಕೆಯಾಗದಿದ್ದರೆ ಜೂನ್1ರಿಂದ 7ರ ವರೆಗೂ ಕಪ್ಪುಪಟ್ಟಿಯನ್ನು ಧರಿಸಿ ಪ್ರತಿಭಟಿಸುವುದಾಗಿ ಅಲ್ಲದೆ ಇಂತಹ ವಿಷಮ ಸ್ಥಿತಿಯಲ್ಲಿ ನೋವಿನಿಂದ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಹೊಸಪೇಟೆ ಉಪವಿಭಾಗಾಧಿಕಾರಿಗಳು ಸಿದ್ಧರಾಮೇಶ್ವರ ಹಾಗೂ ತಹಶೀಲ್ದಾರ್ ಮೇಘನಾ ಮುಖಾಂತರ ವೈದ್ಯಾಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ. ರೂಪಸಿಂಗ್ ರಾಥೋಡ, ಡಾ.ಮಂಜುನಾಥ, ಡಾ.ಶಿವಶರಣಯ್ಯ, ಡಾ.ಕುಮಾರ್, ಡಾ. ಪ್ರಸಾದಬಾಬು, ಡಾ.ಸರಸ್ವತಿ ಪಾಲ್ಗೊಂಡಿದ್ದರು.