
ಸಂಜೆವಾಣಿ ವಾರ್ತೆ
ದಾವಣಗೆರೆ.ನ.೬: ಭಾರತದ ಪುರಾತನ ವೈದ್ಯ ಪದ್ದತಿಯಾದ ಆಯುಷ್‌ನಿಂದ ಸಂಕ್ರಾಮಿಕ, ಮಾರಕ ರೋಗಗಳನ್ನು ಕಡಿಮೆ ಮಾಡುವ ಜತೆ ಜನರ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಬಹುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್‌ಗೌಡ ತಿಳಿಸಿದರು.2023-24ನೇ ಸಾಲಿನ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ. ಯೋಜನೆಯಡಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ದಾವಣಗೆರೆ, ಜಿಲ್ಲಾ ಆಯುಷ್ ಇಲಾಖೆ, ಚಿಗಟೇರಿ ಸಾರ್ವಜನಿಕ ಆಸ್ಪತ್ರೆ, ಆಯುಷ್ ವಿಭಾಗ, ಹೋಮಿಯೋಪತಿ ಘಟಕ, ದಾವಣಗೆರೆ, ದಾವಣಗೆರೆ ತಾಲೂಕಿನ ಕನಗೊಂಡನಹಳ್ಳಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಇವರ ಸಂಯುಕ್ತಾಶ್ರಯದಲ್ಲಿ ಹೊಸ ಕುಂದವಾಡ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಆಯುಷ್ ಸೇವಾಗ್ರಾಮ ಉದ್ಘಾಟನೆ ನೆರವೇರಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಆಧುನಿಕ ಔಷಧಿ ಪದ್ದತಿಗಳು ರೋಗಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತವೆಯಾದರೂ, ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿವೆ, ಅದಕ್ಕಾಗಿಯೇ ಆಯುಷ್ ಪದ್ದತಿಗಳನ್ನು ಬಳಸಿಕೊಂಡು ರೋಗ ಪರಿಹಾರಗಳನ್ನು ಕಂಡುಹಿಡಿಯಲು ಹಲವಾರು ಅಧ್ಯಯನ ನಡೆಸಲಾಗಿದ್ದು, ಯಶಸ್ಸು ದೊರೆತಿವೆ. ಇತ್ತೀಚಿನ ದಿನಗಳಲ್ಲಿ ಆಯುಷ್ ಜನರ ಜೀವನ ಪದ್ದತಿಯಾಗುತ್ತಿದೆ ಎಂದು ಹೇಳಿದರು.ಗ್ರಾಮದ ಮುಖಂಡ ಮಹೇಶ್ವರಪ್ಪ ಬೊಮ್ಮಜ್ಜರ್ ಮಾತನಾಡಿ, ಕಳೆದ ವರ್ಷವೂ ಈ ಕಾರ್ಯಕ್ರಮ ಇದೇ ಗ್ರಾಮದಲ್ಲಿ ಮತ್ತೊಂದು ಭಾಗದಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಶಂಕರಗೌಡ ಅವರಲ್ಲಿ ಮನವಿ ಮಾಡಿದ ನಂತರ ಇದೀಗ ಕಾರ್ಯಕ್ರಮ ನಡೆದಿದೆ. ಗ್ರಾಮಸ್ಥರು ಹೆಚ್ಚು ಉಪಯೋಗ ಪಡೆಯಿರೆಂದು ಕರೆ ನೀಡಿದರು.ಗ್ರಾಮದ ಮುಖಂಡ ಅಣ್ಣಪ್ಪ ಅರಿಶಿಣಘಟ್ಟ, ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಒ.ಸಂತೋಷ್, ಡಾ.ಕೃಷ್ಣ ಶೃಂಗಾರತೋಟ, ಡಾ.ಎಸ್.ಎಸ್.ಅನುರಾಧ, ಡಾ.ಮಲ್ಲಿಕಾರ್ಜುನ್ ಬೂದಿಹಾಳ್, ಡಾ.ಬಿ.ಹೆಚ್.ದ್ಯಾವನಗೌಡರ್, ಡಾ.ಕೆ.ಎಸ್.ಕಿಶೋರಿ, ಡಾ.ಸಿದ್ದೇಶ್ ಈ. ಬಿಸನಳ್ಳಿ ರೋಗಿಗಳ ತಪಾಸಣೆ ನಡೆಸಿದರು. ಈ ವೇಳ ದೊಡ್ಡಬಾತಿ ಪಿಹೆಚ್‌ಸಿಯ ಸಿಬ್ಬಂದಿ, ಆಶಾ ಕಾರ್ಯಕರ್ತೆ ಮಂಜುಳಮ್ಮ, ಸರ್ವಮಂಗಳ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.