ಆಯುಷ್ಮಾನ ಕಾರ್ಡನ ನೊಂದಣಿ, ಸದುಪಯೋಗ ಮಾಹಿತಿ ಕಾರ್ಯಕ್ರಮ

ರಾಯಚೂರು.ಡಿ.೧೩- ಸೋಮ ಸುಭದ್ರಮ್ಮ ರಾಮನಗೌಡ ಮಹಿಳಾ ಮಹಾವಿದ್ಯಾಲಯ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ಆಯುಷ್ಮಾನ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ ವತಿಯಿಂದ ಆಯುಷ್ಮಾನ ಕಾರ್ಡನ ನೋಂದಣಿ ಕಾರ್ಯಕ್ರಮದ ಮಾಹಿತಿ ಮತ್ತು ಅದರ ಸದುಪಯೋಗ ಹೇಗೆ ಪಡೆಯಬೇಕು ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿ.ಬಿ.ದೊಡಮನಿ, ಎಸ್‌ಎಚ್‌ಐಒ, ಡಿಎಲ್‌ಒ ರಾಯಚೂರು ಇವರು, ಆಯುಷ್ಮಾನ ಕಾರ್ಡನ ಮಾಹಿತಿಯನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು, ರಾಜ್ಯದ ಎಲ್ಲ ನಿವಾಸಿಗಳಿಗೆ ಆರೋಗ್ಯ ಕರ್ನಾಟಕ ಎಂಬ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು ಕರ್ನಾಟಕ ಸರ್ಕಾರವು ದಿನಾಂಕ ೦೨.೦೩.೨೦೧೮ ರಿಂದ ಅನುಷ್ಠಾನಗೊಳಿಸಿದ್ದು, ಬಿಪಿಎಲ್ ಪಡಿತರ ಕಾರ್ಡು ಹೊಂದಿದವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ರೂ.೫.೦೦ ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಲಭ್ಯ. ಎಪಿಲ್ ಕಾರ್ಡುದಾರರು ಅಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ೩೦% ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.೧.೫೦ ಲಕ್ಷ ಇರುತ್ತದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ ಹಾಜರುಪಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ವಿರೇಶ ಗವಿಮಠ, ಎಸ್.ಎಚ್.ಐ.ಒ. ಡಿಎಲ್‌ಒ ರಾಯಚೂರು ಇವರು, ಆಯುಷ್ಮಾನ ಕಾರ್ಡನ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಹೇಗೆ ಪಡೆಯಬೇಕು ಎಂಬ ವಿಷಯ ಕುರಿತು ಮಾತನಾಡುತ್ತಾ, ಸಾಮಾನ್ಯ ದ್ವಿತೀಯ ಹಂತದ ೨೯೧ ಚಿಕಿತ್ಸಾ ವಿದಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ ೨೫೧ ಚಿಕಿತ್ಸಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ ೯೦೦ ಚಿಕಿತ್ಸಾ ವಿಧಾನಗಳು ಹಾಗೂ ೧೬೯ ತುರ್ತು ಚಿಕಿತ್ಸೆಗಳು ಮತ್ತು ೩೬ ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು ೧೬೫೦ ಚಿಕಿತ್ಸೆಗಳು ಲಭ್ಯ. ೧೬೯ ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಸೌಲಭ್ಯ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆ, ತಾಲೂಕಾ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಆಸ್ಪತ್ರೆಗಳಲ್ಲಿನ ಆರೋಗ್ಯ ಮಿತ್ರರು, ಆರೋಗ್ಯ ಸಹಾಯವಾಣಿ ೧೦೪, ಟೋಲ್ ಫ್ರೀ ಸಂಖ್ಯೆ ೧೮೦೦೪೨೫೮೩೩೦ ಇವರುಗಳನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಕಾಲೇಜಿನ ಪ್ರಾಚಾರ್ಯರಾದ ಅಮರೇಗೌಡ ಎಸ್ ಮಾತನಾಡುತ್ತಾ, ಆಯುಷ್ಮಾನ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಪೂರ್ಣವಾದ ಆರೋಗ್ಯ ಯೋಜನೆಯಾಗಿರುತ್ತದೆ, ಸಮಾಜದ ಬಡ ಜನರಿಗೆ ಗಂಭೀರ ಆರೋಗ್ಯ ಸಮಸ್ಸೆ ಉದ್ಭವಿಸಿದರೆ ಸಹಯಕಾರಿಯಾಗಲಿ ಎಂದು ಈ ಯೋಜನೆ ರೂಪಿಸಲಾಗಿದೆ, ಈ ಯೋಜನೆಯ ಉದ್ದೇಶ ಎಲ್ಲರಿಗೂ ಆರೋಗ್ಯ ಎಲ್ಲೆಡೆ ಆರೋಗ್ಯ ನೀಡುವುದಾಗಿರುತ್ತದೆ, ಇಂದಿನ ಆಹಾರ ಪದ್ಧತಿ, ವಾತಾವರಣ, ಮುಂತಾದ ಕಾರಣಗಳಿಂದ ಈ ಜನರಲ್ಲಿ ಆರೋಗ್ಯದ ಸಮಸ್ಸೆಗಳು ಉಂಟಾಗುತ್ತವೆ ಅವುಗಳ ಪರಿಹಾರಕ್ಕೆ ಈ ಯೋಜನೆ ಸಹಾಯಕಾರಿಯಾಗಿದೆ. ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡು ಪ್ರಯೋಜನೆ ಪಡೆಯಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದ ವೇದಿಕೆ ಮೇಲೆ ಸಹೀವಾ ಬಾನು (ಸಿನಿಯರ್ ಲ್ಯಾಬ್ ಟೆಕ್ನಿಷಿಯನ್), ಮಹೇಂದ್ರ ಕುಮಾರ ಹೆಚ್.ಐ.ಒ, ರಾಜು (ಪಿ.ಎಮ್.ಡಬ್ಲ್ಯೂ), ಶ್ರೀಕಾಂತ (ಹೆಚ್.ಐ.ಒ), ಅರುಣ ಕುಮಾರ (ಹೆಚ್.ಐ.ಒ), ಧನಲಕ್ಷ್ಮೀ ಧರ್ಮಸ್ಥಳ ಸಂಘದವರು, ಉಪಪ್ರಾಚಾರ್ಯರಾದ ಡಾ. ವೆಂಕಟಪ್ಪ ನಾಯಕ್, ಎನ್.ಎಸ್.ಎಸ್. ಅಧಿಕಾರಿಗಳಾದ ಡಾ. ಹನುಮಂತ ನಾಯ್ಕ್, ಐ.ಕ್ಯೂ.ಎ.ಸಿ ಸಂಯೋಜಕರಾದ ಸಂಜಯ ಪವಾರ್, ಇಂಗ್ಲೀಷ ಉಪನ್ಯಾಸಕರಾದ ರಜನಿ ಶಿವರಾಜ್, ಕನ್ನಡ ಉಪನ್ಯಾಸಕರಾದ ಗಿರಿಯಪ್ಪ ಉಪಸ್ಥಿತರಿದ್ದರು.
ಕು. ವೆನ್ನಿಲಾ ಇವರ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕು. ನಾಜೀಯಾ ಸುಲ್ತಾನ, ಇತಿಹಾಸ ವಿಭಾಗದ ಮುಖ್ಯಸ್ಥರು ಸ್ವಾಗತವನ್ನು ಕೋರಿದರು, ಡಾ. ಅರುಣಾ ಹಿರೇಮಠ ಹಿಂದಿ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮವನ್ನು ನಿರೂಪಿಸಿದರು. ಸಣ್ಣವೀರನಗೌಡ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ & ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.