ಆಯುಷ್ಮಾನ್ ಯೋಜನೆಗೆ ಟೆಡ್ರೂಸ್ ಪ್ರಶಂಸೆ

ಗುಜರಾತ್,ಅ.೧೯-ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ದೇಶದ ಎಲ್ಲಾ ಜನರಿಗೆ ಆರೋಗ್ಯ ವಿಮೆಯನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಗುಜರಾತಿನ ಗಾಂಧಿನಗರದಲ್ಲಿ ನಡೆದ ಜಿ೨೦ ಆರೋಗ್ಯ ಸಚಿವರ ಸಭೆಯಲ್ಲಿ ತಮ್ಮ ಆರಂಭಿಕ ಭಾಷಣದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಶ್ಲಾಘಿಸಿದರು.ಎಲ್ಲಾ ಜನರಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಲು ಕೇಂದ್ರವು ಉತ್ತಮ ಪ್ರಯತ್ನಗಳನ್ನು ಮಾಡುತ್ತಿದೆ. ಆಯುಷ್ಮಾನ್ ಹೆಲ್ತ್ ಇನ್ಶೂರೆನ್ಸ್ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದೆ ಎಂದು ಟೆಡ್ರೊಸ್ ಹೇಳಿದರು. ಈ ಸಭೆಗಳನ್ನು ಆಯೋಜಿಸಿದ್ದಕ್ಕಾಗಿ ಅವರು ಭಾರತಕ್ಕೆ ಧನ್ಯವಾದ ಅರ್ಪಿಸಿದರು. ಗಾಂಧಿನಗರ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳು ಹಾಗೂ ಸೇವೆಗಳು ಉತ್ತಮವಾಗಿವೆ ಎಂದು ತಿಳಿಸಿದರು.
ಗುಜರಾತ್ ಸರ್ಕಾರ ಆರಂಭಿಸಿರುವ ಟೆಲಿಮೆಡಿಸಿನ್ ಸೇವೆಗಳನ್ನೂ ಅವರು ಶ್ಲಾಘಿಸಿದರು.
ಮೂರು ದಿನಗಳ ಜಿ೨೦ ಆರೋಗ್ಯ ಸಚಿವರ ಸಭೆ ಇಂದು ಕೊನೆಗೊಳ್ಳಲಿದೆ. ಈ ಸಭೆಗಳಲ್ಲಿ ವಿವಿಧ ದೇಶಗಳ ಒಟ್ಟು ೭೦ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾರತ ಸರ್ಕಾರದ ಪ್ರಯತ್ನಗಳನ್ನು ವ್ಯಾಪಕವಾಗಿ ಪ್ರಶಂಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಭಾರತ ಅನುಸರಿಸಿದ ನೀತಿಯನ್ನು ನಾವು ಸಭೆಗೆ ವಿವರಿಸುತ್ತಿದ್ದೇವೆ. ಅವರೆಲ್ಲ ಕೇಂದ್ರದ ನೀತಿಗಳನ್ನು ಹೊಗಳುತ್ತಿದ್ದಾರೆ. ಮೋದಿ ಸರ್ಕಾರ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ನೀತಿಯನ್ನು ಜಾರಿಗೆ ತರುತ್ತಿದೆ ಎಂದು ಸಚಿವರು ತಿಳಿಸಿದರು.