ಆಯುಷ್ಮಾನ್ ಭಾರತ್, ಜನೌಷಧಿ ಜಾರಿ ಆರೋಗ್ಯ ಸೇವೆಗೆ ರಹದಾರಿ


ನವದೆಹಲಿ,ಏ.೭- ಉನ್ನತ ಗುಣಮಟ್ಟದ ಮತ್ತು ಕೈಗೆಟಕುವ ಆರೋಗ್ಯ ಸೇವೆಯನ್ನು ಜನತೆಗೆ ಖಾತ್ರಿ ಪಡಿಸಲು ಭಾರತ ಸರ್ಕಾರ ’ಆಯುಷ್ಮಾನ್ ಭಾರತ್ ಮತ್ತು ’ಪ್ರಧಾನಮಂತ್ರಿ ಜನೌಷಧಿ ಯೋಜನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ವಿಶ್ವ ಆರೋಗ್ಯ ದಿನವಾದ ಇಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಜನತೆಗೆ ಟ್ವೀಟ್ ಮೂಲಕ ಈ ಸಂದೇಶ ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ವಿರುದ್ಧದ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತ ವಿಶ್ವದ ಅತಿದೊಡ್ಡ ಲಸಿಕೆ ಆಂದೋಲನ ಹಮ್ಮಿಕೊಂಡಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ನಿಯಮಿತವಾಗಿ ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಹಾಗೂ ಇತರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಮುನ್ನೆಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕೊರೊನಾ ವಿರುದ್ಧ ಹೋರಾಡಲು ಹೆಚ್ಚು ಗಮನ ಹರಿಸೋಣ ಎಂದು ಜನತೆಗೆ ಕರೆ ನೀಡಿದ್ದಾರೆ.
ರೋಗನಿರೋಧಕ ಶಕ್ತಿ ಹೆಚ್ಚಿಸಲು ಶಾರೀರಿಕವಾಗಿ ಸದೃಢರಾಗಿರಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಜನತೆ ತೆಗೆದುಕೊಳ್ಳಬೇಕು.
ವಿಶ್ವ ಆರೋಗ್ಯದಿನದ ಮೂಲಕ ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಹಗಲು-ರಾತ್ರಿ ಕೆಲಸ ಮಾಡುತ್ತಿರುವ ಎಲ್ಲರಿಗೂ ತಮ್ಮ ಕೃತಜ್ಞತೆ ಹಾಗೂ ಮೆಚ್ಚುಗೆಯನ್ನು ಪುನರುಚ್ಛರಿಸಬೇಕು ಎಂದ ಅವರು, ಆರೋಗ್ಯ ರಕ್ಷಣೆಯಲ್ಲಿ ಸಂಶೋಧನೆ ಮತ್ತು ನಾವಿನ್ಯತೆಗಳನ್ನು ಬೆಂಬಲಿಸುವ ನಮ್ಮ ಬದ್ಧತೆಯನ್ನು ಪುನರುಚ್ಛರಿಸುವ ದಿನ ಎಂದು ಮೋದಿ ತಿಳಿಸಿದ್ದಾರೆ.