ಆಯುಷ್ಮಾನ್ ಕಾರ್ಡು ಹಂಚಿಕೆ ವಿಳಂಬ
 ಡಿಹೆಚ್ ಓ ವಿರುದ್ದ  ಸಚಿವರ ಆಕ್ರೋಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.07: ಬಡ ಜನತೆಯ ಚಿಕಿತ್ಸೆಗೆ ಅನು ಕೂಲವಾಗುವ ಭಾರತ್ ಆಯುಷ್  ಮಾನ್ ಕಾರ್ಡುಗಳ ಹಂಚಿಕೆಯಲ್ಲಿ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆ ಕೊನೆ ಸ್ಥಾನದಲ್ಲಿರುವುದರ ಬಗ್ಗೆ ಸಚಿವ ಬಿ.ಶ್ರೀರಾಮುಲು ಅವರು  ಡಿ ಹೆಚ್ ಓ  ಜನಾರ್ಧನ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಇಂದು ಜಿಲ್ಲಾ ಪಂಚಾಯ್ತಿಯ ಸಭಾಂಗಣದಲ್ಲಿ  ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ 16 ಲಕ್ಷ ಕಾರ್ಡುಗಳನ್ನು ವಿತರಿಸಬೇಕು ಆದರೆ ಕೇವಲ  ನಾಲ್ಕು ಲಕ್ಷ ಕಾರ್ಡುಗಳನ್ನಿ ಮಾತ್ರ ಈವರೆಗೆ ಹಂಚಿದೆ. ಇದು ರಾಜ್ಯದ ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ತೀರಾ ಹಿಂದುಳಿದಿದೆ ಇದು ಸರಿಯಲ್ಲ. ನೀವು ಚುರುಕಾಗಿ‌ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿ. ಬರುವ ಎರೆಡು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಈ ಮಧ್ಯೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ,   ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಸಹ ಅಸಮಾಧಾನ ವ್ಯಕ್ತಪಡಿಸಿ. ಆರೋಗ್ಯಕ್ಕೆ ಸಂಬಂಧಿಸಿದ ಕೆಲಸ ತ್ವರಿತವಾಗಿ ಮಾಡದಿದ್ದರೆ ಹೇಗೆ ಎಂದರು. ಅಲ್ಲದೆ ಸೋಮಶೇಖರ ರೆಡ್ಡಿ ಅವರು ಇಲಾಕೆಯ ವಿಳಂಬದಿಂದಾಗಿ ನಗರದಲ್ಲಿ ಖಾಸಗಿ ಎಜೆನ್ಸಿ ಮೂಲಕ ವಿತರಿಸಲು ವ್ಯವಸ್ಥೆ ಮಾಡಿದೆಂದರು.‌
ಸಕಾಲಕ್ಕೆ ನೀಡದಿದ್ದರೆ ಏನು ಉಪಯೋಗ, ಜಿಲ್ಲೆ 29 ನೇ ಸ್ಥಾನದಲ್ಲಿ ಇದೆ ಎಂದರೆ ಹೇಗೆ ಎಂದು ಸಂಸದ ವೈ ದೇವೇಂದ್ರಪ್ಪ ತರಾಟೆಗೆ ತೆಗೆದುಕೊಂಡರು.
ಆಗ ಮಧ್ಯ ಪ್ರವೇಶ ಮಾಡಿದ ಎಡಿಸಿ ಮಂಜುನಾಥ ಅವರು ಜಿಲ್ಲೆಯ 140 ಗ್ರಾಮ ಒನ್, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ರೇಷನ್ ಅಂಗಡಿಗಳಲ್ಲಿಯೂ ವಿತರಿಸುವ ವ್ಯವಸ್ಥೆ ಮಾಡಿದೆ. ನಮ್ಮ‌ಜಿಲ್ಲೆ 29 ನೇ ಸ್ಥಾನದಲ್ಲಿತ್ತು ಈಗ 18 ನೇ ಸ್ಥಾನದಲ್ಲಿದೆ. ಈ ತಿಂಗಳ ಅಂತ್ಯದೊಳಗೆ ಹತ್ತರೊಳಗೆ  ಬರಲಿದೆಂದು ಹೇಳಿದರು.
ಗಂಗಾ ಕಲ್ಯಾಣ ಯೋಜನೆ ಯಡಿ ಮೂರು ತಿಂಗಳಲ್ಲಿ ಎಲ್ಲಾ ಬೋರ್ ವೆಲ್ ಗಳು ನೀರು ಸರಬರಾಜು ಆಗುವಂತೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ  ಎಚ್ಚರಿಕೆ ನೀಡಿದರು
ಸಿರುಗುಪ್ಪ ಶಾಸಕ
 ಪರಿಚಯಿಸಿಕೊಳ್ಳಿ:
ಸಭೆಯಲ್ಲಿ ಅಂಬೇಡ್ಕರ್ ನಿಗಮದ ಅಧಿಕಾರಿ ಮಾತನಾಡುವಾಗ, ಸಂಡೂರು ಶಾಸಕ ಈ ತುಕರಾಂ ಅವರು ಮಾತನಾಡಿ ಜಿಲ್ಲೆಗೆ ಹೊಸದಾಗಿ ಬಂದವರು ಮೊದಲು ಪರಿಚಯ ಮಾಡಿಕೊಳ್ಳಿ, ಅಲ್ಲದೆ ಯಾರೇ ಬರಲಿ, ಬಂದ ತಕ್ಷಣ ಶಾಸಕರಿಗೆ ಕರೆ ಮಾಡಿ ಪರಿಚಯ ಮಾಡಿಕೊಳ್ಳಲು ಸೂಚನೆ ನೀಡಿ ಎಂದು ಸಿಈಓ ಗೆ ಕೇಳಿದರು.
 ವಿದ್ಯುತ್ ಸಂಪರ್ಕ ನಿಲ್ಲಿಸಬೇಡಿ:
ಕರೆಂಟ್ ಬಿಲ್ ಕಟ್ಟಿಲ್ಲ ಎಂದು ಹತ್ತಾರು ಜನ ಹಳ್ಳಿಗಳಿಗೆ ಹೋಗಿ ಮಾನವೀಯತೆ ಇಲ್ಲದೆ  ಜೆಸ್ಕಾಂ ನವರು ವಿದ್ಯುತ್ ಸಂಪರ್ಕ ಕಟ್ ಮಾಡುವುದು ಬಿಡಬೇಕು. ಮನಸ್ಸಿಗೆ ಬಂದಂತೆ ಬಿಲ್ ಹಾಕುತ್ತಿದೆ  ಎಂದು ಶಾಸಕ ನಾಗೇಂದ್ರ ಕೋಪದಿಂದ ಪ್ರಶ್ನಿಸಿದಾಗ ಜೆಸ್ಕಾಂ ಅಧಿಕಾರಿಗಳು ಈ ಸಮಸ್ಯೆ ಸರಿಪಡಿಸಲಿದೆಂದರು.
ಮೈಕ್ ಸಮಸ್ಯೆ ಸರಿಪಡಿಸಿ:
ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಸಭಾಂಗಣ ನಿರ್ಮಿಸಿದೆ. ಆದರೆ ಪ್ರತಿ ಟೇಬಲ್ ಗಳಿಗೆ ಇರುವ ಮೈಕ್ ಗಳು ಏಕೆ ಕೆಲಸ ಮಾಡಲ್ಲ. ಇವು ಇದ್ದು ಪ್ರತ್ಯೇಕ ಮೈಕ್ ಏಕೆ ಎಂದು ಶಾಸಕ ತುಕರಾಂ ಪ್ರಶ್ನಿಸಿದರು.
ನಮ್ಮ ಹೊಲ ನಮ್ಮ ರಸ್ತೆ;
ಕೊಪ್ಪಳ ಸಂಸದ ಕರಡಿ ಸಂಗಣ್ಣ ಮಾತನಾಡಿ ನರೇಗಾದಡಿ ನಮ್ಮ ಹೊಲ, ನಮ್ಮ ರಸ್ತೆ ಯೋಜನೆಯಡಿ ಎಷ್ಟು ಮಾಡಿದ್ದೀರಿ  ಎಂದು ಪ್ರಶ್ನಿಸಿದರೆ. ಆ ಬಗ್ಗೆ ಪ್ರಗತಿ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಗದ್ದೆಗಳಲ್ಲಿನ ಬಂಡಿ ಜಾಡುಗಳನ್ನು ಈ ಯೋಜನೆಯಡಿ ಅಭಿವೃದ್ಧಿ ಪಡಿಸಿ ಎಂದು ಸೂಚಿಸಿದರು.
 ಗಂಟು ರೋಗ:
ಬಳ್ಳಾರಿ ಜಿಲ್ಲೆಯಲ್ಲಿ 1ಲಕ್ಷದ 80 ಜಾನುವಾರುಗಳಿದ್ದು ಅದರಲ್ಲಿ 90 ಸಾವಿರ ಜಾನುವಾರುಗಳಿಗೆ ಲಸಿಕೆ ನೀಡಿದೆ.
ಗಂಟು ರೋಗದಿಂದ
ಈವರಗೆ  ರೋಗದ ಲಕ್ಷಣಗಳಿಂದ ಸತ್ತ  50 ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಿದೆ. 150 ಜನರಿಗೆ ನೀಡಲು ಸಿದ್ದತೆ ನಡೆದಿದೆ. ಎಮ್ಮೆಗೆ ಕಾಯಿಲೆ ಕಾಣಿಸಿಕೊಂಡಿಲ್ಲ ಎಂದು ಪಶು ಸಂಗೋಪನ‌ ಇಲಾಖೆಯ ಉಪ ನಿರ್ದೇಶಕರು ಸಭೆಗೆ ತಿಳಿಸಿದರು. ಆಗ ಶಾಸಕ ತುಕರಾಂ ಅವರು ತಾಲೂಕುವಾರು ವಿವರ ಕೊಡಿ, ಒಟ್ಟಾರೆ ಹೇಳಬೇಡಿ ಸಂಡೂರು ತಾಲೂಕಿಗೆ ಏನಾಗಿದೆಂದು ಪ್ರಶ್ನಿಸಿದರು.
ಸಭೆಯಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಜಿಪಂ ಸಿಇಓ ಲಿಂಗಮೂರ್ತಿ ಪಾಲ್ಗೊಂಡಿದ್ದರು.