ಆಯುಷ್ಮತಿ ಕ್ಲಿನಿಕ್ ಹಾಗೂ ನಮ್ಮ ಕ್ಲಿನಿಕ್ ಬಡವರಿಗೆ ಉಪಯುಕ್ತ ಯೋಜನೆ

ವಿಜಯಪುರ: ಮಾ.28:”ಆಯುಷ್ಮತಿ ಕ್ಲಿನಿಕ್ ಹಾಗೂ ನಮ್ಮ ಕ್ಲಿನಿಕ್ ಬಡವರಿಗೆ ಉಪಯುಕ್ತ ಆರೋಗ್ಯ ಯೋಜನೆಗಳಾಗಿವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಸೋಮವಾರ ವಿಜಯಪುರ ನಗರದ ಭೂತನಾಳ ತಾಂಡಾ ಮತ್ತು ಮಠಪತಿಗಲ್ಲಿ ಸ್ಪಾಪಿಸಲಾದ ‘ನಮ್ಮ ಕ್ಲಿನಿಕ್’ಅನ್ನು ಹಾಗೂ ದರ್ಗಾದ ನಗರ ಆರೋಗ್ಯ ಕೇಂದ್ರದ “ಆಯುಷ್ಮತಿ ಕ್ಲಿನಿಕ್” ಚಾಲನೆ ನೀಡಿ, ಅವರು ಮಾತನಾಡಿದರು.

“ಆಯುಷ್ಮತಿ ಕ್ಲಿನಿಕ್” ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಹಾಗೂ ಮಹಿಳಾ ಆರೋಗ್ಯ ಸೇವೆಗಳ ಒದಗಿಸುವ ಹೊಸ ಯೋಜನೆಯಾಗಿದೆ. ಮಹಿಳೆಯರಿಗಾಗಿ ರೂಪುಗೊಂಡ ಈ ಕ್ಲಿನಿಕ್‍ನಲ್ಲಿ ಉಚಿತವಾಗಿ ತಜ್ಞ ವೈದ್ಯರ ಸೇವೆ, ಆಪ್ತ ಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧಿ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೇಪರಲ್ ಸೇವೆಗಳು ಲಭ್ಯವಿರಲಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಇಂಡಿ, ಸಿಂದಗಿ, ಮುದ್ದೇಬಿಹಾಳ, ಬ.ಬಾಗೇವಾಡಿ, ತಾಳಿಕೋಟಿ ಹಾಗೂ ವಿಜಯಪುರ ನಗರದಲ್ಲಿ ವರ್ಚುಲ್ ಮೂಲಕ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಈಗಾಗಲೇ “ನಮ್ಮ ಕ್ಲಿನಿಕ್” ಲೋಕಾರ್ಪಣೆಗೊಳಿಸಿದ್ದಾರೆ. ನಮ್ಮ ಕ್ಲಿನಿಕ್‍ಗಳು ಮೂಲ ಸೌಕರ್ಯದೊಂದಿಗೆ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತ್ತಿವೆ. ವೈದ್ಯಾಧಿಕಾರಿ, ಶುಶ್ರೂಷಣಾಧಿಕಾರಿ, ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳು ಸೇರಿದಂತೆ ಅಗತ್ಯ ಸಿಬ್ಬಂದಿಗಳು ಕಾರ್ಯನಿರ್ವಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕ್ಲಿನಿಕ್‍ನಲ್ಲಿ ಗರ್ಭಿಣಿ ಆರೈಕೆ ಹಾಗೂ ಬಾಣಂತಿ ಸೇವೆಗಳು, ನವಜಾತ ಶಿಶು ಆರೈಕೆ ಹಾಗೂ ಚುಚ್ಚು ಮದ್ದು ಸೇವೆಗಳು, ಹದಿಹರೆಯದವರಿಗೆ ನೀಡುವ ಆರೋಗ್ಯ ಸೇವೆಗಳು, ಹಿರಿಯ ನಾಗರಿಕರ ಆರೈಕೆ ಹಾಗೂ ಉಪಶಾಮಕ ಆರೈಕೆ, ದಂತ ಆರೋಗ್ಯ ಸೇವೆ, ತುರ್ತು ವೈದ್ಯಕೀಯ ಸೇವೆ, ಮಾನಸಿಕ ಆರೋಗ್ಯ ಸೇವೆಗಳು ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಗಳು ‘ನಮ್ಮ ಕ್ಲಿನಿಕ್’ನಲ್ಲಿ ದೊರೆಯಲಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರಾಜಕುಮಾರ ಯರಗಲ್ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ಕೆ.ಡಿ ಗುಂಡಬಾವಡಿ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಪರಶುರಾಮ ಹಿಟ್ಟನಹಳ್ಳಿ, ದರ್ಗಾ ನಗರ ಆರೋಗ್ಯ ಕೇಂದ್ರದ ವೈದ್ಯ ಡಾ. ಈರಣ್ಣ ಧಾರವಾಡಕರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ.ಎಮ್ ಕೊಲೂರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಸುರೇಶ ಹೊಸಮನಿ, ಸಿಟಿ ಪ್ರೊಗ್ರಾಂ ಮ್ಯಾನೇಜರ್ ಶ್ರೀಮತಿ ಲತಾ, ಜಿಲ್ಲಾ ಪ್ರೊಗ್ರಾಂ ಮ್ಯಾನೇಜರ್ ಮಹಾದೇವ ನಿಲಂಗಿ, ಐ.ಇ.ಸಿ ವಿಭಾಗದ ಡಿಇಓ ಕುಮಾರ ರಾಠೋಡ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಉಪಸ್ಥಿತರಿದ್ದರು.