ಆಯುರ್ವೇದದಿಂದ ಆರೋಗ್ಯ ವೃದ್ಧಿ: ಶಿವಕುಮಾರ ಶ್ರೀಗಳು

ಬೀದರ್ :ನ.14:ಇಂದು ಆಯುರ್ವೇದವು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿ ಮಾರ್ಪಟ್ಟಿದ್ದು, ಇದರಲ್ಲಿ ಯಾವುದೇ ನ್ಯೂನ್ಯತೆಗಳು ಹಾಗೂ ಅಡ್ಡ ಪರಿಣಾಮಗಳಿರುವುದಿಲ್ಲ ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪರಮ ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿಗಳು ನುಡಿದರು.
ಇತ್ತೀಚೆಗೆ ಏನ್ ಕೆ ಜಾಬ ಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಧನವಂತರಿ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದರು.
ಇಂದು ದೀರ್ಘ ಕಾಲದ ಕಾಯಿಲೆಗಳಿಗೆ ಆಯುರ್ವೇದ ಪದ್ಧತಿಯ ಚಿಕಿತ್ಸೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೂ ಅಲೋಪತಿ ಚಿಕಿತ್ಸೆ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ಜನ ಇಂದು ಮತ್ತೆ ಪುರಾತನ ಕಾಲದ ಚಿಕಿತ್ಸಾ ಪದ್ಧತಿಯಾದ ಆಯುರ್ವೇದ ಚಿಕಿತ್ಸೆಗೆ ಮಾರು ಹೋಗುತ್ತಿರುವುದು ಸಮಾಧಾನದ ಸಂಗತಿ ಎಂದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿ ಬಿ.ಜಿ ಷಟಕಾರ ಈ ಸಂದರ್ಭದಲ್ಲಿ ಮಾತನಾಡಿ. ಈ ಹಿಂದೆ ನನ್ನ ಕಾಲಿಗೆ ಗಾಯವಾದಾಗ ನಾನು ಅಲೋಪತಿಯಲ್ಲಿ ಚಿಕಿತ್ಸೆ ಪಡೆದರೂ ಸಹ ಅದು ವಾಸಿಯಾಗದ ಕಾರಣ ಶಸ್ತ್ರ ಚಿಕಿತ್ಸೆ ಮಾಡಿಕೊಂಡೆ. ಆದರೂ ಸಹ ಅದು ಫಲ ನೀಡಲಿಲ್ಲ. ನಂತರ ನಾನು ಆಯುರ್ವೇದ ಪದ್ಧತಿಯ ಚಿಕಿತ್ಸೆ ಪಡೆದ ನಂತರ ಸಂಪೂರ್ಣ ಗುಣಮುಖವಾಗಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಪ್ರಭು ಶೆಟ್ಟಿ ಮುದ್ದಾ, ನಿರ್ದೇಶಕರಾದ ಮಡಿವಾಳಪ್ಪ ಗಂಗಶೆಟ್ಟಿ, ಉದಯ ಭಾನು ಹಲವಾಯಿ, ಆಡಳಿತಾಧಿಕಾರಿ ಡಾ.ಹಾವಗಿರಾವ ಮೈಲಾರೆ, ಡೀನ್ ವಿಜಯಕುಮಾರ ಬಿರಾದಾರ, ಉಪ ಪ್ರಾಚಾರ್ಯರಾದ ಶ್ರೀದೇವಿ ಮಠಪತಿ ಸೇರಿದಂತೆ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಪ್ರಾಚಾರ್ಯರಾದ ಡಾ.ಚಂದ್ರಕಾಂತ ಹಳ್ಳಿ ಸ್ವಾಗತಿಸಿದರು. ಡಾ. ಪ್ರೀತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶೈಲಜಾ ಕಾರ್ಯಕ್ರಮ ನಿರೂಪಿಸಿ, ಡಾ ಅನುಪ ವಂದಿಸಿದರು.