ಆಯುಕ್ತರ ದಿಢೀರ್ ಭೇಟಿ: ಕೋವಿಡ್ ನಿಯಮ ಉಲ್ಲಂಘನೆಗೆ ದಂಡ

ಧಾರವಾಡ, ಮಾ 27: ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಅವರ ನೇತೃತ್ವದಲ್ಲಿಂದು ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಧಾರವಾಡದ ಸಪ್ತಾಪೂರದಿಂದ ಜಯನಗರದವರೆಗೆ ಇರುವ ವಿವಿಧ ಕೋಚಿಂಗ್ ಕೇಂದ್ರಗಳಿಗೆ, ಪಿಜಿ ಕೇಂದ್ರಗಳಿಗೆ ಮತ್ತು ಗ್ರಂಥಾಲಯಗಳಿಗೆ ದಿಡೀರ್ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದರು.
ಕೋವಿಡ್ ನಿಯಮ ಕುರಿತು ಧಾರವಾಡದಲ್ಲಿರುವ ಪಿಜಿ ಕೇಂದ್ರ, ನಿರಂತರ ಲೈಬ್ರರಿ ಮತ್ತು ಕೋಚಿಂಗ್ ಕೇಂದ್ರಗಳಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾಸ್ಕ್ ಧರಿಸದೆ ಸಂಚರಿಸುವುದು ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಪಾಡದಿರುವ ಕುರಿತು ಪರಿಶೀಲಿಸಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಸಾಮಾಜಿಕ ಅಂತರ ಪಾಲಿಸದ ಸ್ಪರ್ಧಾ ಕೇಂದ್ರಗಳಿಗೆ ಈಗಾಗಲೇ ದಂಡ ವಿದಿಸಲಾಗಿದ್ದು, ನಿಯಮ ಪಾಲಿಸದಿರುವುದು ಮರುಕಳಿಸಿದರೆ ಮತ್ತು ಸರ್ಕಾರ ನೀಡಿರುವ ಎಸ್‍ಓಪಿ ಅಳವಡಿಸಿಕೊಳ್ಳದಿದ್ದರೆ ಅವರ ಟ್ರೇಡ್ ಲೈಸ್ನಸ್ ರದ್ದುಪಡಿಸಿ, ಬಿಲ್ಡಿಂಗ್ ಸೀಜ್ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದರು.
ಸಪ್ತಾಪೂರದಲ್ಲಿರುವ ಕ್ಲಾಸಿಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯ ಯುನಿಟ್ ಎ, ಬಿ ಮತ್ತು ಡಿ ಗಳಿಗೆ ಬೇಟಿ ನೀಡಿ ಪರಿಶೀಲಿಸಿದ ಆಯುಕ್ತರು ಸ್ಥಳದಲ್ಲಿಯೇ 5 ಸಾವಿರ ದಂಡ ವಿಧಿಸಿ ಎಚ್ಚರಿಕೆಯ ನೋಟಿಸಿ ನೀಡಿದರು.
ವಿವಿಧ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳಾದ ಎಎಲ್‍ಪಿ ಸಂಸ್ಥೆ, ಯುನಿಕ್‍ಡ್ರೀಮ್, ಎಸ್-ಯುಪಿಸಿ ಸಂಸ್ಥೆ, ಸ್ಪರ್ಧಾ ಜಿನಿಯಸ್, ಬುಲಬುಲೆ, ಚಾಣಕ್ಯ ತರಬೇತಿ ಕೇಂದ್ರಗಳು ಹಾಗೂ ಸ್ಪರ್ಧಾ ಬೆಳಕು, ದಿ ಯುನಿಕ್ ಡ್ರೀಮ್ ಲೈಬ್ರರಿ ಹಾಗೂ ಪಿಜಿಗಳಿಗೆ ಬೇಟಿ ನೀಡಿ ಸಾಮಾಜಿಕ ಅಂತರ ಪಾಲಿಸದಿರುವ ಮತ್ತು ಮಾಸ್ಕ ಧಾರಣೆ ಕಡ್ಡಾಯಗೊಳಿಸದೆ ಇರುವುದರಿಂದ ತಲಾ 5 ಸಾವಿರ ರೂ. ದಂಡ ಹಾಗೂ ಎಚ್ಚರಿಕೆ ನೋಟಿಸ್‍ನ್ನು ನೀಡಲಾಯಿತು.
ಕಾರ್ಯಾಚರಣೆ ಸಂದರ್ಭದಲ್ಲಿ ಮಾಸ್ಕ್ ಧರಿಸದೆ ಇರುವವರು ದಂಡ ಕಟ್ಟಲು ವಿನಾಯಿತಿ ಕೇಳಿದಾಗ ಅವರಿಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದಿನಕರ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಧಾರವಾಡ ತಾಲೂಕಾ ವೈದ್ಯಾಧಿಕಾರಿ ಡಾ.ಕೆ.ಎನ್.ತನುಜಾ ನೇತೃತ್ವದಲ್ಲಿ ಸ್ಥಳದಲ್ಲಿಯೇ ಆರ್ಟಿಪಿಸಿಆರ್ ಮೂಲಕ ಸ್ವ್ಯಾಬ್ ಟೆಸ್ಟ್ ಮಾಡಲಾಯಿತು.
ಕಾರ್ಯಾಚರಣೆಯಲ್ಲಿ 40 ಸಾವಿರಕ್ಕೂ ಅಧಿಕ ದಂಡ ವಸೂಲು ಮಾಡಲಾಯಿತು. ದಂಡ ಕಟ್ಟಲು ನಿರಾಕರಿಸಿದ ಸುಮಾರೂ 25 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಯಿತು.
ವಿಶೇಷ ಕಾರ್ಯಾಚರಣೆಯಲ್ಲಿ ವಲಯ ಸಹಾಯಕ ಆಯುಕ್ತ ರೇವಣಸಿದ್ದಪ್ಪ ದಶವಂತ, ಆರೋಗ್ಯ ನಿರೀಕ್ಷಕರಾದ ಶಾಂತಗೌಡ ಬಿರಾದಾರ, ಮದುಕೇಶ್ವರ ರಾಯ್ಕರ, ಪಕೀರಪ್ಪ ಮಾದರ ಮತ್ತು ಬಿಲ್‍ಕಲೇಕ್ಟರ್, ಸೂಪರವೈಜರ್ಗಳು ಭಾಗವಹಿಸಿದ್ದರು.