ಆಯುಕ್ತರಿಂದ ಇಂಗುಗುಂಡಿ ನಿರ್ಮಾಣ ಕಾಮಗಾರಿ ವೀಕ್ಷಣೆ

ಅಳ್ನಾವರ,ಜ.13: ತಾಲೂಕಿನ ಹೊನ್ನಾಪೂರ ಹಾಗೂ ಕೋಗಿಲಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಂತರ್ ಜಲ ಹೆಚ್ಚಳ ಮಾಡಲು ನರೇಗಾ ಯೋಜನೆಯಡಿ ಆರಂಭವಾದ ಇಂಗು ಗುಂಡಿ ನಿರ್ಮಾಣ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಆಯುಕ್ತ ಅನಿರುದ್ದ ಶ್ರವಣ ವೀಕ್ಷಿಸಿದರು.
ಹೊನ್ನಾಪೂರದಲ್ಲಿ ರೂ. 2.70 ಲಕ್ಷ ಹಾಗೂ ಕೋಗಿಲಗೇರಿಯಲ್ಲಿ ರೂ. 8.47 ಲಕ್ಷದ ಇಂಗು ಗುಂಡಿ ನಿರ್ಮಾಣ ಸ್ಥಳಕ್ಕೆ ಅನಿರುದ್ದ ಭೇಟಿ ನೀಡಿ ಕಾಮಗಾರಿಯ ಗುಣ ಮಟ್ಟ ವೀಕ್ಷಿಸಿ, ಕಾರ್ಮಿಕರ ಸಮಸ್ಯೆ ಆಲಿಸಿದರು.
ಕಳೆದ ಮೂರು ವಾರದಿಂದ ನಮಗೆ ಕೂಲಿ ಹಣ ನಮ್ಮ ಬ್ಯಾಂಕ್ ಖಾತೆಗೆ ಜಮಾವಣೆ ಆಗಿಲ್ಲ. ಸರಿಯಾಗಿ ನಮಗೆ ಕೂಲಿ ಹಣ ಪಾವತಿಸಿ, ನಮಗೆ ಕನಿಷ್ಟ ಎರಡು ನೂರು ದಿನ ಕೂಲಿ ನೀಡಬೇಕು ಎಂದು ಕಾರ್ಮಿಕರು ವಿನಂತಿಸಿದರು. ನರೇಗಾ ಯೋಜನೆಯಡಿ ಒಬ್ಬರಿಗೆ 100 ದಿನ ಕೂಲಿ ನೀಡಲಾಗುವದು. ಈ ಭಾಗ ಅತೀವೃಷ್ಟಿ ಘೋಷಣೆ ಆದ ಬಳಿಕ ಅದನ್ನು 150 ದಿನಕ್ಕೆ ವಿಸ್ತರಿಸಲಾಗಿದೆ ಎಂದು ಅರವಟಗಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಪ್ಪಯ್ಯ ಬೀಡಿಮಠ ಮಾಹಿತಿ ನೀಡಿದರು.
ದಿನಕ್ಕೆ ಎಷ್ಟು ತಾಸು ಕೆಲಸ ಮಾಡುತ್ತಿರಿ, ನಿಮಗೆ ಬ್ಯಾಂಕ್ ಹತ್ತಿರ ಇದಿಯೋ, ಹಣ ಯಾವ ರೀತಿ ಪಡೆಯುತ್ತಿರಿ ಮುಂತಾದ ಮಾಹಿತಿಯನ್ನು ಆಯುಕ್ತರು ಕಾರ್ಮಿಕರಿಗೆ ಕೇಳಿದರು. ತಾವು ದೂರದ ಊರಿನಿಂದ ಬರಲು ತೊಂದರೆ ಇದೆ. ನಮಗೆ ವಾಹನ ವ್ಯವಸ್ಥೆ ಮಾಡಬೇಕು ಅಥವಾ ಸಂಚಾರ ಬತ್ತೆ ನೀಡಿ ಎಂದು ಹಲವು ಕಾರ್ಮಿಕರು ವಿನಂತಿಸಿದರು. ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಕೋಗಿಲಗೇರಿ ಗ್ರಾಮದಲ್ಲಿ ನರೇಗಾ ಕಾಮಾಗಾರಿ ನಡೆದ ಸ್ಥಳದಲ್ಲಿ ಈಚೆಗೆ ಮೃತ ಪಟ್ಟ ಫಕ್ಕೀರಪ್ಪ ಚುಂಚನೂರ ಅವರ ಕುಟುಂಬಕ್ಕೆ ರೂ. 30 ಸಾವಿರ ಪರಿಹಾರ ನೀಡಲಾಗಿದೆ ಎಂದು ಕೆಲಸ ಮಾಡುತ್ತಿದ್ದ ಮೃತಳ ಪತ್ನಿ ರುದ್ದವ್ವ ಆಯುಕ್ತರಿಗೆ ಮಾಹಿತಿ ನೀಡಿದರು. ಅವರಿಗೆ ಇನ್ನೂ ರೂ 45 ಸಾವಿರ ಹೆಚ್ಚಿನ ಪರಿಹಾರ ನೀಡಿ ಎಂದು ಸ್ಥಳದಲ್ಲಿಯೆ ಹಾಜರಿದ್ದ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕುಂದೂರ ಅವರಿಗೆ ಅಯುಕ್ತರು ಸೂಚನೆ ನೀಡಿದರು.
ತಾಲ್ಲೂಕ ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎಸ್. ಕೊಡಳ್ಳಿ, ಗ್ರಾಮೀಣ ಉದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ ಕೋರಿ, ಆರ್ ಎಫ್ ಓ ಈರೇಶ ಕಬ್ಬೇರ, ಗಜೇಂದ್ರ, ಯಶೋಧಾ ಗುಂಜಿ, ತೇಜಸ್ಸ ದೊಡ್ಡಮನಿ, ಸಂತೋಷ ಕಲಾಜ, ನಿರ್ಮಲಾ ಗಸ್ತಿ ಇದ್ದರು.