ಆಯಾ ಮತಕ್ಷೇತ್ರಗಳಿಗೆ ಇವಿಎಂ ರವಾನೆಗೆ ಕ್ರಮ

ಬೆಳಗಾವಿ, ಏ.5: ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಕಂಪ್ಯೂಟರ್ ಆಧಾರಿತ ಪ್ರಥಮ ರ್ಯಾಂಡಮೈಜೇಷನ್(ಯಾದೃಚ್ಛಿಕ) ಪ್ರಕ್ರಿಯೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಪ್ರಥಮ ರ್ಯಾಂಡಮೈಜೇಷನ್ ಪ್ರಕ್ರಿಯೆ ನಡೆಯಿತು.
ಜಿಲ್ಲೆಯ ಹದಿನೆಂಟು ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 4434 ಮತಗಟ್ಟೆಗಳಿವೆ.
ಬ್ಯಾಲೆಟ್ ಯುನಿಟ್-5321(ಶೇ.120), 5321 ಕಂಟ್ರೋಲ್ ಯುನಿಟ್(ಶೇ.120) ಮತ್ತು 5765-ವಿವಿಪ್ಯಾಟ್ (ಶೇ.130)ಗಳನ್ನು ಪೂರೈಕೆ ಮಾಡಲಾಗುತ್ತದೆ.
ಮೊದಲ ಹಂತದ ಪರಿಶೀಲನೆ(ಎಫ್.ಎಲ್.ಸಿ) ಬಳಿಕ ಜಿಲ್ಲೆಯಲ್ಲಿ ಒಟ್ಟು 8257 ಬ್ಯಾಲೆಟ್ ಯುನಿಟ್, 6740 ಕಂಟ್ರೋಲ್ ಯುನಿಟ್ ಹಾಗೂ 5848 ವಿವಿಪ್ಯಾಟ್ ಗಳು ಇರುತ್ತವೆ ಎಂದು ಜಿಲ್ಲಾಧಿಕಾರಿ ಮಾಹಿತಿಯನ್ನು ನೀಡಿದರು.
ಹೈದ್ರಾಬಾದ್ ಇಸಿಐ ಕಂಪನಿಯಿಂದ ಇವಿಎಂ ಪೂರೈಸಲಾಗಿರುತ್ತದೆ. ಅವುಗಳನ್ನು ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಈಗಾಗಲೇ ಮೊದಲ ಹಂತದ ಪರಿಶೀಲನೆ(ಎಫ್.ಎಲ್.ಸಿ) ಮಾಡಲಾಗಿರುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪ್ರಥಮ ರ್ಯಾಂಡಮೈಜೇಷನ್ ನಡೆಯುತ್ತದೆ ಎಂದು ತಿಳಿಸಿದರು.
ಇದಾದ ಬಳಿಕ ಆಯಾ ಮತಕ್ಷೇತ್ರಗಳಿಗೆ ಮತಯಂತ್ರಗಳನ್ನು ಕಳುಹಿಸಲಾಗುತ್ತದೆ. ಆಯಾ ವಿಧಾನಸಭಾ ವ್ಯಾಪ್ತಿಯ ಸ್ಟ್ರಾಂಗ್ ರೂಮ್ ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಟ್ ಸೇರಿ ಒಟ್ಟಾರೆ 20 ಸಾವಿರಕ್ಕೂ ಅಧಿಕ ಯಂತ್ರಗಳು ಇವೆ. ಇವುಗಳ ಪೈಕಿ ಯಾವ ಯಂತ್ರ ಯಾವ ಕ್ಷೇತ್ರಕ್ಕೆ ಹೋಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಪ್ರಥಮ ರ್ಯಾಂಡಮೈಜೇಷನ್ ಬಳಿಕ ಯಾವ ಇವಿಎಂ ಯಾವ ಕ್ಷೇತ್ರಕ್ಕೆ ಹೋಗಲಿದೆ ಎಂಬುದು ಗೊತ್ತಾಗುತ್ತದೆ.
ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಎರಡನೇ ರ್ಯಾಂಡಮೈಜೇಷನ್:
ಎರಡನೇ ಹಂತದ ರ್ಯಾಂಡಮೈಜೇಷನ್ ಪ್ರಕ್ರಿಯೆಯು ಆಯಾ ಮತಕ್ಷೇತ್ರಗಳ ಚುನಾವಣಾ ವೀಕ್ಷಕರ ಉಪಸ್ಥಿತಿಯಲ್ಲಿ ನಡೆಯಲಿದೆ. ಇದಾದ ಬಳಿಕವೇ ಯಾವ ಮತಯಂತ್ರ(ಇವಿಎಂ) ಯಾವ ಮತಗಟ್ಟೆಗೆ ಹೋಗುತ್ತದೆ ಎಂಬುದು ತಿಳಿಯುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಪ್ರಥಮ ರ್ಯಾಂಡಮೈಜೇಷನ್ ಬಳಿಕ ಬೆಳಗಾವಿ ನಗರದಲ್ಲಿರುವ ಚುನಾವಣಾ ಆಯೋಗದ ಉಗ್ರಾಣದ ಮೂಲಕ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಮತಯಂತ್ರಗಳನ್ನು ಬಿಗಿ ಬಂದೋಬಸ್ತ್ ಮೂಲಕ ಕಳಿಸಲಾಗುತ್ತದೆ ಎಂದು ವಿವರಿಸಿದರು.
ಆಯಾ ಮತಕ್ಷೇತ್ರಗಳ ಸ್ಟ್ರಾಂಗ್ ರೂಮ್ ನಲ್ಲಿ ಮತಯಂತ್ರಗಳನ್ನು ಸಂಗ್ರಹಿಸಿ ಇಡಲಾಗುತ್ತದೆ.
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲೆಯ ಎಲ್ಲ ಹದಿನೆಂಟು ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ರ್ಯಾಂಡಮೈಜೇಷನ್ ಪ್ರಕ್ರಿಯೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮತಯಂತ್ರಗಳ ರ್ಯಾಂಡಮೈಜೇಷನ್, ಮರು ರ್ಯಾಂಡಮೈಜೇಷನ್ ಹಾಗೂ ಕೊನೆಯಲ್ಲಿ ಅಂತಿಮ ರ್ಯಾಂಡಮೈಜೇಷನ್ ಮಾಡುವ ಮೂಲಕ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ರ್ಯಾಂಡಮೈಜೇಷನ್ ಪ್ರಕ್ರಿಯೆ ಕೈಗೊಂಡು ವಿಧಾನಸಭಾ ಮತಕ್ಷೇತ್ರವಾರು ಇವಿಎಂ ಹಂಚಿಕೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.