ಆಯಾಸದಿಂದ ಹೊರಬರಲು ಜಾನಪದ ಕಲೆ

ಕೋಲಾರ,ಜ.೬ಹಿಂದಿನ ಕಾಲದಲ್ಲಿ ಜನ ತಮ್ಮ ತಮ್ಮ ಹೊಲಗದ್ದೆಗಳಲ್ಲಿ ಬೆಳ್ಳಗೆಯಿಂದ ಸಂಜೆಯವರೆಗೂ ದುಡಿದು ಆಯಾಸಗೊಂಡು ನಿರುತ್ಸಾಹಕರಾಗುತ್ತಿದ್ದರು. ಇಂತಹ ಸಂದರ್ಭದಲ್ಲಿ ತಮ್ಮ ಆಯಾಸವನ್ನು ತಣಿಸಿಕೊಳ್ಳಲು ಹಳ್ಳಿಗಳಲ್ಲಿ ಕೋಲಾಟ, ಉಪ್ಪರಪಟ್ಟೆ, ರಾಗಿಬೀಸುವ ಪದ, ಗೀಗೀಪದ, ಸೋಬಾನೆಪದ ಹೀಗೆ ಹಲವಾರು ಕಲೆಗಳನ್ನು ಪ್ರದರ್ಶಿಸುತ್ತಿದ್ದರು ಎಂದು ಗ್ರಾಮದ ಮುಖಂಡ ರಾಮಪ್ಪ ಹೇಳಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಹಾಗೂ ಶ್ರೀ ವೆಂಕಟೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಮಾಗೇರಿ ಇವರ ಸಂಯುಕ್ತಾಶ್ರಯದಲ್ಲಿ ಬಂಗಾರಪೇಟೆ ತಾಲೂಕಿನ ಯಲುವಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ೨ ತಿಂಗಳ ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನವು ಒಂದು ನೃತ್ಯ ರೂಪಕವಾಗಿದ್ದು, ಮನುಷ್ಯನು ಇಂತಹ ಕಲೆಗಳನ್ನು ಪ್ರದರ್ಶಿಸುತ್ತಿರುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮವಾಗಿರುತ್ತದೆ. ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಜನರ ಮಧ್ಯೆ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ. ಅಲ್ಲದೇ ನಮ್ಮ ಸಂಸ್ಕೃತಿಯನ್ನು ಉಳಿಸಬಹುದೆಂದರು.
ಕಾರ್ಯಕ್ರಮದಲ್ಲಿ ಮುನಿಶಾಮಿ, ಪಿಳ್ಳಪ್ಪ, ಅಶೋಕ್, ನಾರಾಯಣಸ್ವಾಮಿ ಉಪಸ್ಥಿತರಿದ್ದರು. ತರಬೇತಿ ಗುರುಗಳಾದ ವೆಂಕಟೇಶಪ್ಪ ಜಿ ಪ್ರಾರ್ಥಿಸಿ, ಸಹಾಯಕ ಗುರುಗಳಾದ ಮುನಿಯಪ್ಪ ಸ್ವಾಗತಿಸಿ ವಂದಿಸಿದರು.