*ಆಯನೂರು ಮಂಜುನಾಥ್ ಗೆ ಕೆ.ಎಸ್.ಈಶ್ವರಪ್ಪ ತಿರುಗೇಟು

ಶಿವಮೊಗ್ಗ, ಮಾ. 24: ‘ನೂರಾರು ಕಾಮೆಂಟ್ ಬರುತ್ತವೆ. ಅವೆಲ್ಲ ಲೆಕ್ಕಕ್ಕೆ
ಇಟ್ಕೊಳ್ಳಲ್ಲ… ಅವನದ್ದೇಕೆ ಕೇಳೋಕೆ ಹೋಗ್ತಿಯಾ… ಯಾರಿಗೆ ಟಿಕೆಟ್ ನೀಡಬೇಕು ಎಂಬುವುದು
ಪಕ್ಷ ನಿರ್ಧರಿಸುತ್ತೆ… ಜನರು ಮೆಚ್ಚುವ ರೀತಿ ಕೆಲಸ ಮಾಡಿದ್ದೇನೆ…!’
ಇದು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾತುಗಳು. ಸ್ವಪಕ್ಷೀಯ ಮುಖಂಡ, ವಿಧಾನ
ಪರಿಷತ್ ಶಾಸಕ ಆಯನೂರು ಮಂಜುನಾಥ್ ಅವರು ನೀಡಿರುವ ಹೇಳಿಕೆಗಳ ಕುರಿತಂತೆ ಸುದ್ದಿಗಾರರ
ಸಾಲುಸಾಲು ಪ್ರಶ್ನೆಗಳಿಗೆ ಕೆ.ಎಸ್.ಈಶ್ವರಪ್ಪ ನೀಡಿದ ಪ್ರತಿಕ್ರಿಯೆಗಳ
ಪ್ರಮುಖಾಂಶಗಳು.
ಗುರುವಾರ ಶಿವಮೊಗ್ಗ ನಗರದ ಬಿಜೆಪಿ ಕಚೇರಿಯಲ್ಲಿ ದಾವಣಗೆರೆಯಲ್ಲಿ ಆಯೋಜಿಸಲಾಗಿರುವ
ಬಿಜೆಪಿ ಸಮಾವೇಶದ ಕುರಿತಂತೆ ನಡೆದ ಸುದ್ದಿಗೋಷ್ಠಿಯ ವೇಳೆ, ಆಯನೂರು ಮಂಜುನಾಥ್
ಮಾಡಿರುವ ಆರೋಪ – ಟೀಕೆಗಳ ಬಗ್ಗೆ ಕೆ.ಎಸ್.ಈಶ್ವರಪ್ಪ ಅವರಿಗೆ ಸುದ್ದಿಗಾರರು
ಪ್ರಶ್ನೆಗಳ ಸುರಿಮಳೆಗೈದರು.
ಈ ಕುರಿತಂತೆ ಪಕ್ಷದ ಜಿಲ್ಲಾಧ್ಯಕ್ಷರು ಪ್ರತಿಕ್ರಿಯೆ ನೀಡುತ್ತಾರೆ ಎಂದು
ಕೆ.ಎಸ್.ಈಶ್ವರಪ್ಪ ಉತ್ತರಿಸಲು ನಿರಾಕರಿಸಿದರು. ಸುದ್ದಿಗಾರರು ಇದೇ ವಿಷಯದ ಕುರಿತಂತೆ
ಪ್ರಶ್ನಿಸಿದಾಗ, ‘ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಕೇಂದ್ರ-ರಾಜ್ಯ
ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ವರಿಷ್ಠರ ನಿರ್ಧಾರಕ್ಕೆ ಬದ್ದವಿದ್ದೆನೆ. ತಾವು
ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೆನೆ’ ಎಂದರು.
‘ರಾಜಕೀಯ ಕ್ಷೇತ್ರಕ್ಕೆ ಇಳಿದ ನಂತರ ಮನಸ್ಸು ತೃಪ್ತಿಯಾಗುವ ರೀತಿಯಲ್ಲಿ, ಜನರು
ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದ್ದೆನೆ. ನೂರಾರು ಕಾಮೆಂಟ್ ಗಳು ಬರುತ್ತವೆ. ಅವೆಲ್ಲ
ಲೆಕ್ಕಕ್ಕೆ ಇಲ್ಲ. ಅದನ್ನು ತಲೆಗೆ ಹಚ್ಚಿಕೊಂಡು ಕುಳಿತುಕೊಳ್ಳಲಾ? ತಮ್ಮದೇನಿದ್ದರೂ
ಜನಪ್ರತಿನಿಧಿಯಾಗಿ ಜನರ ಕೆಲಸ ಏನೂ ಮಾಡಬೇಕು ಎಂಬುವುದಾಗಿದೆ’ ಎಂದರು.
ಹಾಗಾದರೆ ಆಯನೂರು ಮಂಜುನಾಥ್ ಅವರ ಹೇಳಿಕೆ ನಿಮಗೆ ಲೆಕ್ಕಕ್ಕಿಲ್ಲವೆ ಎಂಬ ಸುದ್ದಿಗಾರರ
ಪ್ರಶ್ನೆಗೆ, ‘ನಿನ್ದೆ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಮತ್ತೆ ಅವನದ್ದೇನೂ ಕೇಳೊಕೆ
ಹೋಗ್ತಿಯಾ..!’ ಎಂದು ಗರಂ ಆದರು. ನಂತರ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮೈಕ್
ಹಸ್ತಾಂತರಿಸಿದರು. ಗೋಷ್ಠಿಯಲ್ಲಿ ಶಾಸಕ ಡಿ.ಎಸ್.ಅರುಣ್, ಪಕ್ಷದ ಜಿಲ್ಲಾಧ್ಯಕ್ಷ
ಮೇಘರಾಜ್ ಮೊದಲಾದವರಿದ್ದರು.