ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಬಡತನ ತೊಲಗುತ್ತದೆ- ಡಾ.ಸುಭಾಷಚಂದ್ರ ಸಂಬಾಜಿ

ರಾಯಚೂರು,ನ,೧೫- ಆಮ್ ಆದ್ಮಿ ಪಕ್ಷ ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಡತನ ತೋಲಗುತ್ತದೆ ಬಡವರು ನೆಮ್ಮದಿಯಿಂದ ಜೀವನ ಸಾಗಿಸಬಹುದು ಎಂದು ಪಕ್ಷದ ಗ್ರಾಮೀಣ ಮತಕ್ಷೇತ್ರದ ಆಕಾಂಕ್ಷಿ ಡಾ.ಸುಭಾಷಚಂದ್ರ ಸಂಬಾಜಿ ಅವರು ಹೇಳಿದರು.
ಅವರು ನಗರದಲ್ಲಿ ಗ್ರಾಮೀಣ ಪ್ರದೇಶದ ಹತ್ತು ಹಲವು ಗ್ರಾಮಗಳ ಮುಖಂಡರು ಮತ್ತು ಯುವಕರು ಎ.ಎ.ಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ದೇಶದ ತುಂಬೆಲ್ಲಾ ಭ್ರಷ್ಟಾಚಾರ ತಾಂಡವಾಡುತ್ತಿದೆ ಇದನ್ನು ಅರಿತ ಕೇಜ್ರಿವಾಲ್ ಅವರು ಇದನ್ನು ಹೋಗಲಾಡಿಸಲು ದೆಹಲಿಯಲ್ಲಿ ಎ.ಎ.ಪಿಯನ್ನು ಕಟ್ಟಿ ಅದರ ತತ್ವ ಸಿದ್ಧಾಂತಗಳ ಮೇಲೆ ಸಾಗಿ ದೆಹಲಿಯಲ್ಲಿ ಎ.ಎ.ಪಿ ಪಕ್ಷ ಅಧಿಕಾರಕ್ಕೆ ತಂದು ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ಬಡವರಿಗಾಗಿ ಉಚಿತ ವಿದ್ಯುತ್, ನೀರಿನ ಕರ ಶಾಲಾ ವಿಧ್ಯಾರ್ಥಿನಿಯರಿಗೆ ಬಸ್ ಪಾಸ್ ಇನ್ನೂ ಹತ್ತು ಹಲವು ಸೌಲಭ್ಯಗಳನ್ನು ಒದಗಿಸಿದ್ದಾರೆ. ನಂತರ ಪಂಜಾಬ್ ನಲ್ಲಿ ಎ.ಎ.ಪಿ ಅಧಿಕಾರ ಹಿಡಿಯಿತು ಅಲ್ಲಿಯ ಜನತೆ ಉಚಿತ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಎ.ಎ.ಪಿ ಅಧಿಕಾರಕ್ಕೆ ತಂದರೆ ಉಚಿತ ಸೌಲಭ್ಯಗಳನ್ನು ಪಡೆಯಬಹುದು ಎಂದು ಡಾ. ಸುಭಾಷಚಂದ್ರ ಸಂಬಾಜಿ ಅವರು ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಜೋನ್ -೦೫ ಸಂಯೋಜಕರಾದ ಕೆ.ಬಸವರಾಜ ಗುತ್ತೇದಾರ ಮತ್ತು ಗ್ರಾಮೀಣ ಸಂಘಟನಾ ಕಾರ್ಯದರ್ಶಿ ಆರ್. ವೀರೇಶ್ ಪಕ್ಷದ ಹಿರಿಯ ಮುಖಂಡರಾದ ಸೂಗಪ್ಪ ವಗ್ಗರ್, ಸಾಬಣ್ಣ ಗಟ್ಟುಬಿಚ್ಚಾಲಿ, ಕೆ.ಭೀಮಣ್ಣ ಸಂಗವಾರ ಸೇರಿದಂತೆ ಇನ್ನೂ ಕೆಲ ಪ್ರಮುಖರು ಉಪಸ್ಥಿತರಿದ್ದರು.