ಆಮ್ಲಜನಕ ಸಿಲಿಂಡರ್ ಸ್ಫೋಟ ೨೭ ಮಂದಿ ರೋಗಿಗಳ ಸಾವು

ಬಾಗ್ದಾದ್,ಏ,೨೫ – ಕೊರೊನಾ ರೋಗಿಗಳಿಗೆ ಪೂರೈಕೆ ಮಾಡುತ್ತಿದ್ದ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಆಸ್ಪತ್ರೆಯಲ್ಲಿ ಬೆಂಕಿಯ ಜ್ವಾಲೆ ಕ್ಷಣಮಾತ್ರದಲ್ಲಿ ಆವರಿಸಿ ೨೭ ಮಂದಿ ರೋಗಿಗಳು ಸುಟ್ಟು ಕರಕಲಾಗಿರುವ ಘಟನೆ ಬಾಗ್ದಾದ್ ಆಸ್ಪತ್ರೆಯಲ್ಲಿ ನಡೆದಿದೆ.
ಬೆಂಕಿ ಅವಘಡ ಕಾಣಿಸಿಕೊಂಡ ಸಮಯದಲ್ಲಿ ಆಸ್ಪತ್ರೆಯಲ್ಲಿ ೧೨೦ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದರು, ಆ ಪೈಕಿ ೯೦ ರೋಗಿಗಳನ್ನು ರಕ್ಷಣೆ ಮಾಡಲಾಗಿದೆ. ಆ ಪೈಕಿ ಅನೇಕರು ಗಾಯಗೊಂಡಿದ್ದಾರೆ. ಹಲವು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಮ್ಲಜನಕ ಅವಘಡದಿಂದ ಬೆಂಕಿ ಕಾಣಿಸಿಕೊಂಡಿದ್ದರಿಂದ ಅನೇಕ ರೋಗಿಗಳು ಸುಟ್ಟು ಕರಕಲಾಗಿದ್ದು, ಗುರುತು ಸಿಗದಂತಾಗಿದೆ. ಈ ಬೆಂಕಿ ದುರಂತದಲ್ಲಿ ಇನ್ನಷ್ಟು ಮಂದಿ ಸಾವನ್ನಪ್ಪಿರಬಹುದು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಬ್ನ್ ಅಲ್ ಖತೀಬ್ ಆಸ್ಪತ್ರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನೇಕ ರೋಗಿಗಳು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ.
ಆಸ್ಪತ್ರೆಯ ಡಾ ಸಬಾ ಅಲ್ ಕುಜೈ ಪ್ರತಿಕ್ರಿಯಿಸಿ, ಬೆಂಕಿ ಅವಘಡದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅನೇಕ ಮೃತ ದೇಹಗಳು ಸುಟ್ಟು ಕರಕಲಾಗಿವೆ. ಹೀಗಾಗಿ ಇನ್ನಷ್ಟು ಸಾವು ಹೆಚ್ಚಾಗಿರಬಹುದು ಎಂದು ತಿಳಿಸಿದ್ದಾರೆ.
ಪ್ರಾಥಮಿಕ ವರದಿ ಪ್ರಕಾರ ೨೭ ಮಂದಿ ಮೃತಪಟ್ಟು ೩೬ ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮತ್ತು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಬೆಂಕಿ ಅವಘಡದಿಂದ ಎಷ್ಟು ಮಂದಿ ಮೃತಪಟ್ಟಿದ್ದಾರೆ, ಹಾನಿ ಎಷ್ಟಾಗಿದೆ ಎನ್ನುವ ಬಗ್ಗೆ ಇರಾಕ್ ನ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಮಾಹಿತಿ ತಿಳಿಸಿಲ್ಲ.
ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡು ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ.

ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟ
ಬೆಂಕಿ ಕಾಣಿಸಿಕೊಂಡು ೨೭ ಮಂದಿ ಸಾವು ಅನೇಕರಿಗೆ ಗಾಯ
ಬಾಗ್ದಾದ್ ಆಸ್ಪತ್ರೆಯಲ್ಲಿ ಈ ಘಟನೆ
೯೦ ರೋಗಿಗಳ ರಕ್ಷಣೆ, ಬೇರೆ ಆಸ್ಪತ್ರೆಗೆ ಸ್ಥಳಾಂತರ
ಬೆಂಕಿ ಜ್ವಾಲೆಯ ರಭಸಕ್ಕೆ ಸುಟ್ಟು ಕರಕಲಾದ ರೋಗಿಗಳು
ಬಹುತೇಕರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.