ಆಮ್ಲಜನಕ, ರೆಮ್ಡಿಸಿವಿರ್ ಔಷಧ ಪೂರೈಕೆ ಸಂಬಂಧ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ಕೋವಿಡ್ ಸಂಕಷ್ಟ:ಸರ್ಕಾರದ ಜೊತೆ ಕೈಜೋಡಿಸಲು ಸಂಸದ ಡಾ. ಉಮೇಶ್ ಜಾಧವ್ ಮನವಿ

ಕಲಬುರಗಿ,ಮೇ.04: ಕೋವಿಡ್ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆ ಸೇವಾ ಮನೋಭಾವದಿಂದ ಕೈಜೋಡಿಸಬೇಕೆಂದು ಖಾಸಗಿ ಆಸ್ಪತ್ರೆಗಳಿಗೆ ಸಂಸದ ಡಾ. ಉಮೇಶ್ ಜಾಧವ್ ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕೋವಿಡ್-19 ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸೋಂಕಿತರಿಗೆ ಆಕ್ಸಿಜನ್, ರೆಮ್ಡಿಸಿವಿರ್ ಔಷಧ ಯಾವುದೇ ಸಮಸ್ಯೆಯಾಗದಂತೆ ಸಮರ್ಪಕವಾಗಿ ಪೂರೈಕೆಯಾಗಬೇಕು. ಈ ಸಂಬಂಧ ಪಾರದರ್ಶಕತೆ ಇರಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ kpme.karnataka. gov.in ವೆಬ್‍ಸೈಟ್ ರಚಿಸಿದೆ. ಇದರಲ್ಲಿ ರೋಗಿಯ ಸಂಪೂರ್ಣ ವಿವರ ಹಾಗೂ ಆರೋಗ್ಯದಲ್ಲಿ ಉಂಟಾದ ಸಮಸ್ಯೆಗಳನ್ನು ಅಪಲೋಡ್ ಮಾಡಿದ ನಂತರ ರೋಗಿ ದಾಖಲಾಗಿರುವ ಆಯಾ ಆಸ್ಪತ್ರೆಗಳಿಗೆ ಬೇಕಾದ ಆಕ್ಸಿಜನ್, ರೆಮ್ಡಿಸಿವಿರ್ ಔಷಧಿಗಳನ್ನು ಸರ್ಕಾರ ಒದಗಿಸುತ್ತದೆ. ಇದರ ನಿರ್ವಹಣೆಗಾಗಿ ಐಎಎಸ್ ಅಧಿಕಾರಿ ಮನೀμï ಮೌದ್ಗಿಲ್‍ರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.ಎಂದು ಅವರು ತಿಳಿಸಿದರು.
ಖಾಸಗಿ ಟ್ರಾಮಾಕೇರ್ ನಲ್ಲಿ ಬರುವ ರೋಗಿಗಳಿಗೆ ರೆಮ್‍ಡಿಸಿವಿರ್ ಇಂಜೆಕ್ಷನ್ ಲಭ್ಯವಿಲ್ಲದಿರುವ ಬಗ್ಗೆ ಕೆಲ ಆಸ್ಪತ್ರೆಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಸಂಸದರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಉಮಶ್ ಜಾಧವ್ ಅವರು, ಖಾಸಗಿ ಆಸ್ಪತ್ರೆಯ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ರಚಿಸಿ ಆಕ್ಸಿಜನ್ ಮತ್ತು ರೆಮ್ ಡಿಸಿವಿರ್ ಇಂಜೆಕ್ಷನ್ ತರಿಸಿಕೊಳ್ಳಲು ಕ್ರಮಕೈಗೊಳ್ಳಬೇಕು. ಅವಶ್ಯಕ ಇದ್ದಲ್ಲಿ ಜಿಲ್ಲಾಡಳಿತ ಗಮನಕ್ಕೆ ತರುವಂತೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಒಟ್ಟು ನಾಲ್ಕು ಆಕ್ಸಿಜನ್ ಉತ್ಪಾದನೆ ಘಟಕಗಳಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ನನ್ನು ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳ ಚಿಕಿತ್ಸೆ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ಪೂರೈಕೆಯಾಗಬೇಕು ಎಂದು ಅವರು ಸೂಚಿಸಿದರು.
ಈ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವರಾಜ ಪಾಟೀಲ ರದ್ದೇವಾಡಗಿ, ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್, ಅಪರ ಜಿಲ್ಲಾಧಿಕಾರಿ ಡಾ.ಶಂಕರಣ್ಣ ವಣಿಕ್ಯಾಳ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.